ಶಿರಸಿ (ಉತ್ತರ ಕನ್ನಡ) :ವಿಧಾನಸಭೆ ಚುನಾವಣೆಯಲ್ಲಿಈಶ್ವರಪ್ಫನವರಿಗೆ ಟಿಕೆಟ್ ಕೊಡದಿರಲು ನಾವೇನೂ ಕಾರಣೀಭೂತರಲ್ಲ. ಈ ಹಿಂದೆ ಸರ್ಕಾರ ಯಾರ ತ್ಯಾಗದಿಂದ ಬಂತು, ಯಾರಿಂದ ಅವರಿಗೆ ಸಚಿವ ಸ್ಥಾನ ದೊರೆಯಿತು, ಯಾರು ಮಂತ್ರಿಸ್ಥಾನ ಕಳೆದುಕೊಂಡರು ಎಂಬುದನ್ನು ಅವರು ತಿಳಿದುಕೊಳ್ಳಬೇಕು. ಕೆಲವರಿಗೆ ಮಾತನಾಡುವ ಚಟ ಇರುತ್ತದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಪ್ರತಿಕ್ರಿಯಿಸಿದರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವಂತೂ ಇದನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಿದ್ಧರಿಲ್ಲ. ನಾವು ನಡೆದು ಬಂದಿರುವ ಹಾದಿ, ಮುಂದೆ ನಡೆಯಲಿರುವ ಹಾದಿಯ ಬಗ್ಗೆ ನಮಗೆ ಸ್ಪಷ್ಟತೆ ಇದೆ. ಬಾಲ ತುಂಡರಿಸುವ ಕೆಲಸವನ್ನು ನಾವು ಮಾಡಿಲ್ಲ, ಮಾಡೋದೂ ಇಲ್ಲ ಎಂದರು. ಈ ಬಗ್ಗೆ ಬೆಂಗಳೂರಿನಲ್ಲಿ ಚರ್ಚಿಸಿ, ಹೆಚ್ಚಿನ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದರು.
ಇದನ್ನೂ ಓದಿ:ಮಹಿಳೆಯರಿಂದ ಉತ್ತಮ ಸ್ಪಂದನೆ, ಸರ್ಕಾರದ ಶಕ್ತಿ ಯೋಜನೆ ಸಶಕ್ತ: ಸಚಿವ ರಾಮಲಿಂಗಾ ರೆಡ್ಡಿ
ಮಳೆ ಕೊರತೆಯಿಂದ ರೈತರಿಗೆ ಸಂಕಷ್ಟ: ಇದೇ ವೇಳೆ ಮಳೆ ಸ್ಥಿತಿಗತಿ ಬಗ್ಗೆ ಮಾತನಾಡಿದ ಹೆಬ್ಬಾರ್, ಯಲ್ಲಾಪುರ ಮುಂಡಗೋಡ ವಿಧಾನಸಭಾ ಕ್ಷೇತ್ರದಲ್ಲಿ ಇದುವರೆಗಿನ ವಾಡಿಕೆ ಮಳೆಯಲ್ಲಿ ಶೇ.70 ರಷ್ಟು ಕೊರತೆ ಉಂಟಾಗಿದೆ. ರೈತರು ಬಿತ್ತಿದ ಬೀಜ ಮೊಳಕೆಯೊಡೆಯದೇ ಹಾನಿಗೊಳಗಾಗಿದ್ದು, ಈ ಕ್ಷೇತ್ರವನ್ನು ಬರಗಾಲಪೀಡಿತ ಎಂದು ಘೋಷಿಸಬೇಕು. ಕ್ಷೇತ್ರದಲ್ಲಿ ಮಳೆ ಕೊರತೆಯಿಂದ ರೈತರು ಭೀಕರ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಬರಗಾಲ ಕ್ಷೇತ್ರ ಎಂದು ಘೋಷಣೆಗೆ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ವಿಧಾನಸೌಧದೊಳಗೂ ಆಗ್ರಹಿಸುತ್ತೇನೆ ಎಂದರು.