ಶಿರಸಿ (ಉತ್ತರ ಕನ್ನಡ):"ಸದ್ಯ ನಾನು ಬಿಜೆಪಿ ಶಾಸಕ. ಭವಿಷ್ಯದಲ್ಲಿ ಏನಾಗಬಹುದೆಂದು ಹೇಳಲು ನಾನು ಜ್ಯೋತಿಷಿಯಲ್ಲ" ಎಂದು ಶಾಸಕ ಶಿವರಾಮ್ ಹೆಬ್ಬಾರ್ ಪ್ರತಿಕ್ರಿಯಿಸಿದ್ದಾರೆ. ಜಿಲ್ಲೆಯ ಮುಂಡಗೋಡಿನಲ್ಲಿಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು.
ಮುಂದಿನ ತಿಂಗಳು ನೀವು ಕಾಂಗ್ರೆಸ್ ಸೇರ್ಪಡೆಯಾಗುತ್ತೀರಿ ಎಂಬ ಸುದ್ದಿ ಹರಿದಾಡುತ್ತಿದೆ ಎಂಬ ವಿಚಾರಕ್ಕೆ, "ಅದರ ಬಗ್ಗೆ ನನಗೆ ಮಾಹಿತಿಯಿಲ್ಲ" ಎಂದರು. "ಮುಖ್ಯಮಂತ್ರಿಗಳನ್ನು ಇತ್ತೀಚಿಗೆ ಭೇಟಿ ಮಾಡಿದ ಸಂದರ್ಭದಲ್ಲಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಚರ್ಚಿಸಿಲ್ಲ. ಕ್ಷೇತ್ರವನ್ನು ಬರಗಾಲಪೀಡಿತ ಪ್ರದೇಶವನ್ನಾಗಿ ಘೋಷಣೆ ಮಾಡುವ ಬಗ್ಗೆ ಮಾತ್ರ ಚರ್ಚೆಯಾಯಿತು. ಈ ವಿಚಾರವಾಗಿ ಹೊರಗಡೆ ಇದ್ದವರು ಏನು ಬೇಕಾದರೂ ಮಾತನಾಡುತ್ತಾರೆ. ಆ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಅವರಿಗೆ ಉತ್ತರ ಕೊಡಬೇಕಾದ ಅಗತ್ಯವೂ ಇಲ್ಲ. ನನ್ನ ವಿವೇಚನೆಗೆ ತಕ್ಕಂತೆ ಅದಕ್ಕೆ ಉತ್ತರ ಕೊಡುತ್ತೇನೆ" ಎಂದು ಹೇಳಿದರು.
ಇದನ್ನೂ ಓದಿ:ನನಗೆ ಕಾಂಗ್ರೆಸ್ನಿಂದ ಯಾವುದೇ ಆಹ್ವಾನ ಬಂದಿಲ್ಲ: ನಾನು ಬಿಜೆಪಿ ಬಿಡುವ ಪ್ರಶ್ನೆ ಇಲ್ಲ.. ಮುನೇನಕೊಪ್ಪ ಸ್ಪಷ್ಟನೆ
ಶಾಸಕ ಸೋಮಶೇಖರ್ ಸ್ಪಷ್ಟನೆ:ಮತ್ತೊಂದೆಡೆ, ಬೆಂಗಳೂರಿನಲ್ಲಿ ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಮಾತನಾಡಿ, "ಪಕ್ಷ ಬಿಡುವ ಕುರಿತು ನಾನು ಯಾರೊಂದಿಗೂ ಮಾತುಕತೆ ನಡೆಸಿಲ್ಲ. ಮುಂಬರಲಿರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಮತ್ತು ಬಿಬಿಎಂಪಿ ಚುನಾವಣೆಗೆ ಸ್ಪರ್ಧೆ ಬಯಸಿರುವವರು ಮಾತ್ರ ಕಾಂಗ್ರೆಸ್ ಸೇರಿದ್ದಾರೆ. ನನ್ನೊಂದಿಗಿರಲು ಬಯಸಿರುವ ಬೆಂಬಲಿಗರು ಬಿಜೆಪಿಯಲ್ಲೇ ಇದ್ದಾರೆ" ಎಂದು ಸ್ಪಷ್ಟನೆ ನೀಡಿದ್ದಾರೆ.
"ನಾನು ಪಕ್ಷ ಬಿಡುವ ಬಗ್ಗೆ ಯಾರ ಜತೆಗೂ ಚರ್ಚೆ ಮಾಡಿಲ್ಲ. ಕಾಂಗ್ರೆಸ್ ನಾಯಕರ ಜತೆಗೂ ಇದರ ಬಗ್ಗೆ ಮಾತನಾಡಿಲ್ಲ. ಸಿಎಂ ಜತೆಗೂ ರಾಜಕೀಯ ವಿಚಾರವಾಗಿ ಮಾತನಾಡಿಲ್ಲ. ಕಾಂಗ್ರೆಸ್ಗೆ ನನ್ನ ಬೆಂಬಲಿಗರು ಅಷ್ಟೇ ಅಲ್ಲ, ಎಲ್ಲ ಕ್ಷೇತ್ರಗಳಿಂದಲೂ ಹೋಗಿದ್ದಾರೆ. ಯಾರು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಬಿಬಿಎಂಪಿಗೆ ಸ್ಪರ್ಧೆ ಮಾಡಬೇಕು ಅಂದುಕೊಂಡಿದ್ದಾರೋ ಅವರು ಕಾಂಗ್ರೆಸ್ಗೆ ಹೋಗಿದ್ದಾರೆ. ಯಾರು ಶಾಸಕರ ಜತೆ ಇರಬೇಕು ಅಂದುಕೊಂಡಿದ್ದಾರೋ ಅವರು ನನ್ನ ಜತೆಯೇ ಇದ್ದಾರೆ. ನನ್ನ ಜತೆ 85 ಮುಖಂಡರು ಉಳಿದುಕೊಂಡಿದ್ದಾರೆ, ಯಡಿಯೂರಪ್ಪ ಜತೆಗೂ ಮಾತುಕತೆ ನಡೆಸಿದ್ದೇನೆ. ದುಡುಕಬೇಡ ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ, ನಾನು ದುಡುಕುತ್ತಿಲ್ಲ" ಎಂದು ಹೇಳಿದರು.