ಬೈತಖೋಲ ಬಂದರು ಹೂಳೆತ್ತುವ ಕಾಮಗಾರಿಗೆ ಚಾಲನೆ ಕಾರವಾರ:ಅದು ಪ್ರತಿನಿತ್ಯ ಮೀನುಗಾರಿಕೆಗೆ ಬಳಕೆಯಾಗುವ ಬಂದರಿನ ಜಟ್ಟಿ ಪ್ರದೇಶ. ನೂತನ ಜಟ್ಟಿಯಾಗಿದ್ದರೂ ಸಹ ಆ ಭಾಗದಲ್ಲಿ ಹೂಳು ತುಂಬಿಕೊಂಡಿದ್ದ ಪರಿಣಾಮ ದೊಡ್ಡ ಬೋಟ್ಗಳನ್ನು ನಿಲ್ಲಿಸುವುದು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ಮೀನುಗಾರಿಕಾ ಬೋಟ್ಗಳನ್ನು ಒತ್ತೊತ್ತಾಗಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ದಶಕಗಳ ಸಮಸ್ಯೆಗೆ ಸರ್ಕಾರ ಇದೀಗ ಪರಿಹಾರ ಒದಗಿಸಲು ಮುಂದಾಗಿದೆ.
3.5 ಕೋಟಿ ವೆಚ್ಚದಲ್ಲಿ ಯೋಜನೆ:ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬೈತಖೋಲದ ಮೀನುಗಾರಿಕಾ ಬಂದರು ಪ್ರದೇಶದಲ್ಲಿ ಕಳೆದ ಏಳೆಂಟು ವರ್ಷಗಳಿಂದ ಹೂಳೆತ್ತುವ ಕಾರ್ಯ ನಡೆದಿರಲಿಲ್ಲ. ಪರಿಣಾಮ ಬಂದರು ವ್ಯಾಪ್ತಿಯಲ್ಲಿ ಬೋಟ್ಗಳ ನಿಲುಗಡೆಗೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ಜಟ್ಟಿ ಉಪಯೋಗಕ್ಕೆ ಬಾರದಂತಾಗಿತ್ತು. ನೀರಿನ ಹರಿವು ಹೆಚ್ಚಿದ್ದಾಗ ಮಾತ್ರ ಮೀನುಗಾರಿಕಾ ಬೋಟ್ಗಳು ಮೀನು ತುಂಬಿಕೊಂಡು ಜಟ್ಟಿಯಲ್ಲಿ ನಿಲುಗಡೆ ಮಾಡಬೇಕಿತ್ತು. ನೀರಿನ ಹರಿವು ಕಡಿಮೆಯಿದ್ದಾಗ ಬೋಟ್ಗಳ ತಳಕ್ಕೆ ಹೂಳು ತಾಗುವುದರಿಂದ ಹಾನಿಯಾಗುವ ಸಂಭವವಿತ್ತು.
ಈ ಕಾರಣದಿಂದ ಮೀನುಗಾರರು ಹೂಳು ತೆರವಿಗೆ ಸಾಕಷ್ಟು ಬಾರಿ ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರು. ಇದೀಗ ಸರ್ಕಾರ ಸುಮಾರು 3.5 ಕೋಟಿ ವೆಚ್ಚದಲ್ಲಿ ಬಂದರಿನ ಹೂಳೆತ್ತಲು ಯೋಜನೆ ರೂಪಿಸಿದೆ. ಬಂದರು ಹೂಳೆತ್ತುವಿಕೆ, ಒಣಮೀನು ಒಣಗಿಸುವ ಪ್ಲಾಟ್‌ಫಾರ್ಮ, ರ‍್ಯಾಂಪ್ ನಿರ್ಮಾಣ ಸೇರಿದಂತೆ ಸುಮಾರು 4.5 ಕೋಟಿ ವೆಚ್ಚದ ಯೋಜನೆಗಳಿಗೆ ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶಾಸಕಿ "ಬೈತಖೋಲ ಮೀನುಗಾರಿಕೆ ಬಂದರಿನಲ್ಲಿರುವ ಮೀನುಗಾರಿಕೆ ಜಟ್ಟಿಯಲ್ಲಿ ಹೂಳು ತುಂಬಿಕೊಂಡಿದ್ದರಿಂದ ಬೋಟ್‌ನವರು ತುಂಬಾ ಸಮಸ್ಯೆ ಎದುರಿಸುತ್ತಿದ್ದರು. 3.5 ಕೋಟಿ ರೂ ವೆಚ್ಚದಲ್ಲಿ ಹೂಳೆತ್ತುವ ಕಾಮಗಾರಿ ನಡೆಯಲಿದ್ದು, ಹೂಳಿನ ಸಮಸ್ಯೆ ನಿವಾರಣೆಯಾಗಲಿದೆ. ಹೂಳೆತ್ತುವ ಕಾಮಗಾರಿಯೊಂದಿಗೆ ರ‍್ಯಾಂಪ್ ನಿರ್ಮಾಣ, ಮೀನುಗಾರಿಕೆ ಬಂದರಿನ ಸುತ್ತಮುತ್ತ ಮಳೆ ನೀರು ಹರಿದು ಹೋಗಲು ಚರಂಡಿ ನಿರ್ಮಾಣ ಹಾಗೂ ಮೀನು ಒಣಗಿಸುವ ಪ್ಲಾಟ್‌ಫಾರ್ಮ್ ನಿರ್ಮಾಣ ಕಾಮಗಾರಿ ನಡೆಯಲಿದೆ" ಎಂದು ತಿಳಿಸಿದರು.
ಮೀನುಗಾರಿಕೆಗೆ ಸಂಬಂಧಿಸಿದಂತೆ ಹಿಂದೆ ರಾಜ್ಯ ಸರ್ಕಾರ ಮತ್ತು ಮೀನುಗಾರಿಕೆಗೆ ಪ್ರತ್ಯೇಕ ಇಲಾಖೆ ಹೊಂದಿತ್ತು. ಆದರೆ ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಆಡಳಿತಕ್ಕೆ ಬಂದ ನಂತರ ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯವನ್ನು ಆರಂಭಿಸಿ ಮೀನುಗಾರಿಕೆಗೆ ವಿಶೇಷ ಒತ್ತು ನೀಡಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.
"ಬೈತಖೋಲ ಬಂದರಿನಲ್ಲಿ ಪರ್ಶಿಯನ್ ಹಾಗೂ ಟ್ರಾಲರ್ ಸೇರಿ ಸುಮಾರು 300ಕ್ಕೂ ಅಧಿಕ ಬೋಟ್ಗಗಳಿವೆ. ಪ್ರತಿನಿತ್ಯ ಇಲ್ಲಿನ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುತ್ತವೆ. ಬೋಟ್ಗಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆ 2013ರಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಬಂದರು ಪ್ರದೇಶದ ಜಟ್ಟಿ ವಿಸ್ತರಿಸಿ ನೂತನ ಜಟ್ಟಿಯನ್ನ ನಿರ್ಮಿಸಲಾಗಿತ್ತು. ಆದರೆ ಬಂದರು ಪ್ರದೇಶದಲ್ಲಿ ಹೂಳು ತುಂಬಿದ್ದರಿಂದ ನೂತನ ಜಟ್ಟಿ ಬಳಕೆಗೆ ಬಾರದಂತಾಗಿತ್ತು. ಹಾಗಾಗಿ ಹಳೆಯ ಜಟ್ಟಿ ಪ್ರದೇಶದಲ್ಲೇ ಬಹುತೇಕ ಎಲ್ಲ ಬೋಟ್ಗಳು ನಿಲುಗಡೆಯಾಗುತ್ತಿದ್ದವು. ಇದೀಗ ಸರ್ಕಾರ ಬಂದರು ಹೂಳೆತ್ತಲು ಯೋಜನೆ ರೂಪಿಸಿದೆ. ಆದಷ್ಟು ಶೀಘ್ರದಲ್ಲಿ ಹೂಳೆತ್ತುವ ಕಾರ್ಯ ಪೂರ್ಣಗೊಳ್ಳುವ ವಿಶ್ವಾಸವಿದೆ"- ರಾಜೇಶ ಮಾಜಾಳಿಕರ್, ಬೋಟ್ ಮಾಲೀಕ.
ಇದನ್ನೂ ಓದಿ:Video ನೋಡಿ... ಮುಳುಗುತ್ತಿದ್ದ ಬೋಟ್ನಿಂದ ನಾಲ್ವರು ಮೀನುಗಾರರ ರಕ್ಷಣೆ