ಕಾರವಾರ:ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕರಾವಳಿ ಜಿಲ್ಲೆ ಕಾರವಾರದಲ್ಲಿ ರಾಜಕೀಯ ಚಟುವಟಿಕೆಗಳು ರಂಗೇರಿದೆ. ಕಾರವಾರ ಕ್ಷೇತ್ರ ಹಾಲಿ ಶಾಸಕಿ ರೂಪಾಲಿ ನಾಯ್ಕ ಹಾಗೂ ಮಾಜಿ ಶಾಸಕ ಸತೀಶ್ ಸೈಲ್ ನಡುವಿನ ಕಿತ್ತಾಟ ತಾರಕಕ್ಕೇರಿದೆ. ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಶಾಸಕಿ ವಿರುದ್ದ ಮಾಜಿ ಶಾಸಕ ಸೈಲ್ ದೂರು ಕೊಡಲು ಮುಂದಾದರೆ, ಇತ್ತ ಶಾಸಕಿ ರೂಪಾಲಿ ಸಹ ತನ್ನ ಮೇಲೆ ಸಹ ಹಲ್ಲೆ ಮಾಡಲು ಮಾಜಿ ಶಾಸಕರು ಮುಂದಾಗಿದ್ದಾರೆ ಎಂದು ಪರಸ್ಪರ ದೂರು ದಾಖಲಿಸಿದ್ದಾರೆ.
ಹೌದು, ಚುನಾವಣೆ ಸಮೀಪಿಸುತ್ತಿದ್ದಂತೆ ಕಾರವಾರ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ರಂಗೇರಿದೆ. ಪಿಡಿಒ ವರ್ಗಾವಣೆ ಸಂಬಂಧ ಹಾಲಿ ಹಾಗೂ ಮಾಜಿ ಶಾಸಕರ ನಡುವೆ ವಾಗ್ವಾದ ನಡೆದು ಬಳಿಕ ಜಿಲ್ಲಾ ಪಂಚಾಯಿತಿಯಲ್ಲಿ ಶಾಸಕಿ ರೂಪಾಲಿ ನಾಯ್ಕ ತಮ್ಮ ಮೇಲೆ ಪೇಪರ್ ವೇಟ್ನಿಂದ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಮಾಜಿ ಶಾಸಕ ಸತೀಸ್ ಸೈಲ್ ನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇನ್ನು ಸೈಲ್ ದೂರು ಸಲ್ಲಿಸಿದ ವಿಷಯ ತಿಳಿಯುತ್ತಿದ್ದಂತೆ ಶಾಸಕಿ ರೂಪಾಲಿ ನಾಯಕ ಕೂಡ ಅದೇ ಠಾಣೆಗೆ ಆಗಮಿಸಿ ತಮ್ಮ ತಂದೆಯನ್ನು ಮಾಜಿ ಶಾಸಕ ಸತೀಶ್ ಸೈಲ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಶಾಸಕಿ ರೂಪಾಲಿ ನಾಯ್ಕ ದೂರು ದಾಖಲಿಸಿದ್ದಾರೆ.
ಏನಿದು ಪ್ರಕರಣ.. ತಾಲೂಕಿನ ಮಾಜಾಳಿ ಪಂಚಾಯಿತಿಯ ಪಿಡಿಒ ಅವರನ್ನು ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ ಅರುಣಾ ಎಂಬುವವರನ್ನು ನಿಯೋಜನೆ ಮಾಡಲಾಗಿತ್ತು. ಆದರೆ ಹೊಸ ಪಿಡಿಒ ಅವರಿಗೆ ಕೊಂಕಣಿ ಬಾರದ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಮಾಜಿ ಶಾಸಕ ಸತೀಸ್ ಸೈಲ್ ಜಿ. ಪಂಚಾಯತ್ಗೆ ತೆರಳಿ ಸಿಇಒ ಈಶ್ವರ ಕಾಂದೂ ಅವರೊಂದಿಗೆ ಮಾತುಕತೆ ನಡೆಸಿದ್ದರು.
ಇದೇ ವೇಳೆ ಸಭೆಯೊಂದಕ್ಕೆ ಆಗಮಿಸಿದ್ದ ಹಾಲಿ ಶಾಸಕಿ ರೂಪಾಲಿ ನಾಯ್ಕ ಸಿಇಒ ಕಚೇರಿಗೆ ತೆರಳಿದ್ದರು. ಸಿಇಒ ಶಾಸಕರನ್ನು ಆಹ್ವಾನಿಸಿ ಮೀಟಿಂಗ್ ಹಾಲ್‌ನಲ್ಲಿ ಇದೇ ಪಿಡಿಒ ವರ್ಗಾವಣೆ ಸಂಬಂಧ ಮಾತುಕತೆ ನಡೆಸುತ್ತಿದ್ದಾಗ ಮೊದಲು ಬಂದ ತಮ್ಮನ್ನು ಸಿಇಒ ಕಡೆಗಣಿಸಿದ್ದಾರೆ ಎಂದು ಮಾಜಿ ಶಾಸಕ ಸತೀಶ್ ಸೈಲ್ ಆರೋಪಿಸಿದಾಗ ಮಾಜಿ ಹಾಗೂ ಹಾಲಿ ಶಾಸಕರ ನಡುವೆ ವಾಗ್ವಾದ ನಡೆದು ಬಳಿಕ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲು ಏರುವಂತಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಶಾಸಕ ಸತೀಶ್ ಸೈಲ್, ಮಾಜಾಳಿ ಗ್ರಾಮ ಪಂಚಾಯಿತಿ ಪಿಡಿಒ ಅವರನ್ನು ನಾಲ್ಕು ತಿಂಗಳ ಹಿಂದೆ ವರ್ಗಾವಣೆ ಮಾಡಿ ಹೊಸಬರನ್ನು ನೇಮಕ ಮಾಡಲಾಗಿತ್ತು. ಆದರೆ, ಈ ಬಗ್ಗೆ ಜಿ. ಪಂ ಸಿಇಒ ಅವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ ವೇಳೆ ಶಾಸಕಿ ರೂಪಾಲಿ ನಾಯ್ಕ ಆಗಮಿಸಿದ್ದರು. ಸಿಇಒ ಕಚೇರಿಯಲ್ಲಿ ಇದೇ ವಿಷಯದ ಸಂಬಂಧ ಮಾತನಾಡಿ ಪಕ್ಷಪಾತ ಮಾಡಲು ಆರಂಭಿಸಿದ್ದರು. ಈ ಬಗ್ಗೆ ಸಿಇಒ ಅವರನ್ನು ಪ್ರಶ್ನಿಸಿದ್ದಾಗ ಶಾಸಕಿ ಗಲಾಟೆ ಮಾಡಿದ್ದಾರೆ.