ಕಾರವಾರ:ಹಿಂದಿನ ಸರ್ಕಾರದಲ್ಲಿ ಜಾರಿಯಾದ ಸಾಗರಮಾಲ ಯೋಜನೆಯ ವಿರುದ್ಧ ಅಂದು ಧ್ವನಿ ಎತ್ತದೇ ಜನರಿಗೆ ತಪ್ಪು ಮಾಹಿತಿ ನೀಡಿ, ತಮ್ಮ ವಿರುದ್ಧ ಪ್ರತಿಭಟನೆ ಮಾಡಿದವರು ಇದೀಗ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಸತ್ಯ ಮರೆಮಾಚುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ ಶಾಸಕಿ ರೂಪಾಲಿ ನಾಯ್ಕ್ ಸಚಿವರ ಎದುರೇ ಆಕ್ರೋಶ ವ್ಯಕ್ತಪಡಿಸಿದ ಘಟನೆ ಕಾರವಾರದಲ್ಲಿ ಶನಿವಾರ ನಡೆದಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಗರಮಾಲ ಯೋಜನೆಯಡಿ ವಾಣಿಜ್ಯ ಬಂದರು ಅಭಿವೃದ್ಧಿ ಕುರಿತ ಮೀನುಗಾರರು ಹಾಗೂ ಸಾರ್ವಜನಿಕರ ಅಹವಾಲು ಸಭೆಯ ನಡುವೆ ವಿಷಯ ಪ್ರಸ್ತಾಪಿಸಿದ ಶಾಸಕಿ ರೂಪಾಲಿ ನಾಯ್ಕ್, ಸಾಗರಮಾಲ ಯೋಜನೆಯನ್ನು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದಾರೆ. ಈ ಹಿಂದಿನ ಶಾಸಕರು ಸಭೆಯ ಅಧ್ಯಕ್ಷತೆಯನ್ನುವಹಿಸಿದ್ದರು. ಅಂದು ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಬಳಿಕ ನನ್ನ ವಿರುದ್ಧ ಮೀನುಗಾರರಿಗೆ ತಪ್ಪು ಮಾಹಿತಿ ನೀಡಿ ಸಾಗರಮಾಲ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ.
ಸಂಸದ ಅನಂತಕುಮಾರ್ ಹೆಗಡೆ ಅವರಿಗೆ ಹಾಗೂ ನನ್ನ ಫೋಟೊಗೆ ಚಪ್ಪಲಿ ಹಾರ ಹಾಕಿ ಪ್ರತಿಭಟಿಸಿದಿರಿ. ಯೋಜನೆಯ ಬಗ್ಗೆ ಆರಂಭದಲ್ಲಿಯೇ ವಿರೋಧ ಮಾಡದವರು ನಿಮ್ಮಲ್ಲಿಯೇ ಕೆಲವರಿದ್ದಾರೆ. ಆಗ ಯಾಕೆ ಪ್ರತಿಭಟನೆ ಮಾಡಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಪಟ್ಟು ಹಿಡಿದರು.