ಭಟ್ಕಳ:ಕುಮಟಾ ಶಾಸಕ ದಿನಕರ ಶೆಟ್ಟಿ ಅವರು ಪತ್ರಕರ್ತರ ವಿರುದ್ಧ ಅವಹೇಳನಕಾರಿ ಮಾತನಾಡಿದ ಕುರಿತು ಹಾಗೂ ಬೆಂಗಳೂರಿನ ಗಲಭೆಯಲ್ಲಿ ಪತ್ರಕರ್ತರ ಮೇಲಿನ ಹಲ್ಲೆ ಖಂಡಿಸಿ ಭಟ್ಕಳ ಕಾರ್ಯನಿರತ ಪತ್ರಕರ್ತ ಸಂಘದಿಂದ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಕುಮಟಾ ಶಾಸಕ ದಿನಕರ ಶೆಟ್ಟಿ ಅವರು ಕುಮಟಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಉತ್ತರ ಕನ್ನಡ ಜಿಲ್ಲೆ ಪತ್ರಕರ್ತರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದು ಖಂಡನೀಯ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಜಿಲ್ಲೆಯ ಎಲ್ಲಾ ಪತ್ರಕರ್ತರು ಪತ್ರಿಕಾಗೋಷ್ಠಿಗೆ ಹಣ ಕೇಳುತ್ತಾರೆ ಎನ್ನುವುದಲ್ಲದೆ, ಬೇರೆಯವರ ಹಣದಿಂದಲೇ ಬದುಕುತ್ತಿದ್ದಾರೆ ಎನ್ನುವ ಮೂಲಕ ಜಿಲ್ಲೆಯ ಪತ್ರಕರ್ತರನ್ನು ಅವಹೇಳನ ಮಾಡುವ ಮೂಲಕ ತಮ್ಮ ಕೀಳುಮಟ್ಟದ ಮನಸ್ಥಿತಿಯನ್ನು ತೋರಿಸಿದ್ದಾರೆ. ಇದರಿಂದ ಕಳೆದ ನೂರಾರು ವರ್ಷಗಳಿಂದ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ ಜಿಲ್ಲೆಯ ಅತ್ಯಂತ ಪ್ರಾಮಾಣಿಕ ಪತ್ರಕರ್ತರಿಗೆ ಹಾಗೂ ಹಾಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವ ಪತ್ರಕರ್ತರಿಗೆ ತೀವ್ರ ನೋವಾಗಿದೆ. ತಾವು ತಕ್ಷಣ ಅವರ ಮೇಲೆ ಕ್ರಮ ಕೈಗೊಳ್ಳಬೇಕು, ಇಂತಹ ಕೀಳುಮಟ್ಟದ ಹೇಳಿಕೆಯನ್ನು ನೀಡುವುದನ್ನು ನಿಲ್ಲಿಸುವಂತೆ ತಾಕೀತು ಮಾಡಬೇಕು ಎಂದು ಆಗ್ರಹಿಸಿದರು.
ಇಂತಹ ಹೇಳಿಕೆಗಳನ್ನು ನೀಡುವುದರಿಂದ ಪತ್ರಕರ್ತರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲು ತೊಂದರೆಯಾಗುವುದಲ್ಲದೇ, ಸಮಾಜದಲ್ಲಿ ಗೌರವಯುತವಾಗಿ ನಡೆದುಕೊಳ್ಳುವುದು ಕಷ್ಟವಾಗುತ್ತದೆ. ಸದಾ ಜನರ ಮಧ್ಯದಲ್ಲಿಯೇ ಕಾರ್ಯನಿರ್ವಹಿಸುವ ನಮಗೆ ಇಂತಹ ಹೇಳಿಕೆಗಳಿಂದ ತೊಂದರೆಯಾಗುವುದಲ್ಲದೇ ಕೆಲವೊಂದು ಕಡೆಗಳಲ್ಲಿ ದುಷ್ಕರ್ಮಿಗಳು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ.
ಅದೇ ರೀತಿಯಾಗಿ ಕಳೆದ ಆಗಸ್ಟ್ 11 ರಂದು ಬೆಂಗಳೂರಿನಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿ ಪತ್ರಕರ್ತರನ್ನೇ ಗುರಿಯಾಗಿಸಿ ಹಲ್ಲೆ ಮಾಡಿರುವುದು ಖಂಡನೀಯ. ರಾಜ್ಯದಲ್ಲಿ ಪತ್ರಕರ್ತರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಲಾಗಿದೆ.