ಕಾರವಾರ (ಉ.ಕ): ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ವೇಳೆ ಶಾಸಕಿ ರೂಪಾಲಿ ನಾಯ್ಕ್ ಅಂಕೋಲಾದಲ್ಲಿ ಮತಗಟ್ಟೆಗೆ ತೆರಳಿ ಮತದಾರರ ಯೋಗಕ್ಷೇಮ ವಿಚಾರಿಸಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದು, ಅಧಿಕಾರಿಗಳ ಇಬ್ಬಗೆಯ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮತದಾನ ವೇಳೆ ಮತದಾರರ ಆರೋಗ್ಯ ವಿಚಾರಿಸಿದ ಶಾಸಕಿ ರೂಪಾಲಿ: ಕಾಂಗ್ರೆಸ್ ಕಿಡಿ ಅಂಕೋಲಾದ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಶಾಸಕಿ ರೂಪಾಲಿ ನಾಯ್ಕ್ ಹಾಗೂ 10ಕ್ಕೂ ಅಧಿಕ ಬೆಂಬಲಿಗರು 200 ಮೀಟರ್ ವ್ಯಾಪ್ತಿಯೊಳಗಿನ ಮತಗಟ್ಟೆಗಳಿಗೆ ತೆರಳಿ ಮತದಾರರ ಆರೋಗ್ಯ ವಿಚಾರಿಸಿದ್ದಾರೆ. ಮತದಾರರು ಮತ ಚಲಾಯಿಸುವ ಸಲುವಾಗಿ ಬಿಸಲಲ್ಲಿ ಸಾಲುಗಟ್ಟಿ ನಿಂತಿರುವುದನ್ನು ಕಂಡ ಶಾಸಕಿ ರೂಪಾಲಿ, ಮತದಾರರಿಗೆ ಬಿಸಿಲು ತಾಗದಂತೆ ವ್ಯವಸ್ಥೆ ಕಲ್ಪಿಸಲು ತಹಶೀಲ್ದಾರ್ ಉದಯ್ ಕುಂಬಾರ ಅವರಿಗೆ ಸೂಚಿಸಿದರು.
ಬಳಿಕ ತಹಶೀಲ್ದಾರ್ ಕಚೇರಿಯ ಆವರಣದಿಂದ ಹೊರ ಬಂದಿದ್ದರು. ಇದನ್ನು ಕಂಡ ತಾಲೂಕು ಪಂಚಾಯತ್ ಅಧ್ಯಕ್ಷೆ ಸುಜಾತಾ ಗಾಂವ್ಕರ್, ಅಧಿಕಾರಿಗಳು ಒಬ್ಬರಿಗೊಂದು, ಇನ್ನೊಬ್ಬರಿಗೊಂದು ರೀತಿ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಾಗ್ದಾಳಿ ಮುಂದುವರಿಸಿದ ಸುಜಾತಾ ಗಾಂವ್ಕರ್, ನಾವು (ಕಾಂಗ್ರೆಸ್) ಕಚೇರಿಯ 200 ಮೀಟರ್ ಅಂತರದಲ್ಲಿ ನಿಂತಿದ್ದರೂ ಅಧಿಕಾರಿಗಳು ನಮ್ಮನ್ನು ಇಲ್ಲಿ ನಿಲ್ಲಬೇಡಿ ಎಂದು ಹೇಳಿ ಕಳುಹಿಸುತ್ತಿದ್ದಾರೆ. ನಾವು ಕೂಡ ಚುನಾವಣಾ ನೀತಿ ನಿಯಮಗಳನ್ನು, ಅಧಿಕಾರಿಗಳ ಮಾತಿಗೆ ಸ್ಪಂದಿಸಿ ಮತಗಟ್ಟೆಯಿಂದ ಅಂತರ ಕಾಯ್ದುಕೊಂಡಿದ್ದೇವೆ. ಆದರೆ, ಬಿಜೆಪಿಯವರು 100 ಮೀಟರ್ ಅಂತರದೊಳಗೆ ಪ್ರವೇಶಿಸಬಹುದು. ಇದ್ಯಾವ ನ್ಯಾಯ? ನಮಗೊಂದು, ಅವರಿಗೊಂದು ನ್ಯಾಯವೇ? ಅಧಿಕಾರಿಗಳು ಈ ರೀತಿ ಭೇದ-ಭಾವ ಮಾಡಬಾರದು. ಅವರು ಜನಪ್ರತಿನಿಧಿ ಎಂದು ಅಧಿಕಾರಿಗಳು ಬಿಟ್ಟಿದ್ದರೆ, ನಾನು ಕೂಡ ಜನಪ್ರತಿನಿಧಿ ಎಂದು ಸಿಬ್ಬಂದಿ ವಿರುದ್ಧ ಕಿಡಿಕಾರಿದರು.