ಕಾರವಾರ (ಉತ್ತರಕನ್ನಡ) : ಗೋವಾ-ಕರ್ನಾಟಕ ಗಡಿ ವಿವಾದ ಹಲವು ವರ್ಷಗಳಿಂದ ನಡೆಯುತ್ತಿದೆ. ಇದರ ನಡುವೆ ಗಡಿ ಹಂಚಿಕೊಂಡಿರುವ ಕರ್ನಾಟಕದ ತಾಲೂಕುಗಳಿಗೆ ಅಲ್ಲಿನ ಸರ್ಕಾರ ತನ್ನ ಯೊಜನೆಯೊಂದನ್ನು ವಿಸ್ತರಿಸಿದೆ. ಗಡಿ ತಾಲೂಕುಗಳಲ್ಲಿ ಮಿಷನ್ ರೇಬೀಸ್ ಅನುಷ್ಠಾನ ಮಾಡುತ್ತಿದೆ. ರಾಜ್ಯದಲ್ಲಿ ಬೀದಿ ನಾಯಿಗಳ ಉಪಟಳದಿಂದ ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆಯೊಂದಿಗೆ ರೇಬೀಸ್ ಚುಚ್ಚುಮದ್ದು ನೀಡುವಂತೆ ಅನೇಕ ವರ್ಷಗಳಿಂದ ಜನರು ಆಗ್ರಹಿಸುತ್ತಿದ್ದಾರೆ.
ಕೆಲವು ಜಿಲ್ಲೆಗಳಲ್ಲಷ್ಟೇ ಕರ್ನಾಟಕ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿತ್ತು. ರೇಬೀಸ್ ಚುಚ್ಚುಮದ್ದು ಯೋಜನೆಯಿಂದ ವಂಚಿತವಾಗಿರುವ ಉತ್ತರ ಕನ್ನಡ ಜಿಲ್ಲೆಯ ಗೋವಾ ಗಡಿ ತಾಲೂಕಿನಲ್ಲಿ ಈವರೆಗೂ ಬೀದಿ ನಾಯಿಗಳನ್ನು ಹಿಡಿಯುವ ಅಥವಾ ಅವುಗಳಿಗೆ ಲಸಿಕೆ ನೀಡುವ ಕಾರ್ಯ ನಡೆದಿಲ್ಲ. ಇದರಿಂದ ದೇಶದಲ್ಲಿಯೇ ರೇಬೀಸ್ ಮುಕ್ತ ರಾಜ್ಯವಾಗಿರುವ ಗೋವಾ ಇದೀಗ ಕರ್ನಾಟಕದ ಗಡಿ ತಾಲೂಕುಗಳಿಗೆ 'ಮಿಷನ್ ರೇಬೀಸ್' ಯೋಜನೆಗೆ ತಗಲುವ ಖರ್ಚನ್ನು ತನ್ನ ಬೊಕ್ಕಸದಿಂದಲೇ ವ್ಯಯಿಸಿ ಯೋಜನೆ ಜಾರಿಗೆ ತಂದಿದೆ.
ಕಾರವಾರದಲ್ಲಿ ಈವರೆಗೆ 24ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ರೇಬೀಸ್ ಇರುವುದು ಗೋವಾ ಸರ್ಕಾರ ನಡೆಸಿದ ಪರೀಕ್ಷೆಗಳಲ್ಲಿ ಪತ್ತೆಯಾಗಿದೆ. ಹೀಗಾಗಿ ತನ್ನ ಅನುದಾನ ಬಳಸಿ ಕಾರವಾರ, ಜೋಯಿಡಾ ತಾಲೂಕಿನಲ್ಲಿ ಯೋಜನೆ ಜಾರಿ ಮಾಡಿದೆ. ಕಾರವಾರದಲ್ಲಿ ಕಳೆದ ಎರಡು ವಾರದಿಂದ ಆ ರಾಜ್ಯದ ಮಿಷನ್ ರೇಬೀಸ್ ತಂಡ 2,500ಕ್ಕೂ ಹೆಚ್ಚು ಶ್ವಾನಗಳಿಗೆ ರೇಬೀಸ್ ಚುಚ್ಚುಮದ್ದು ನೀಡಿದೆ. ಪಣಜಿಯಿಂದ ಕಾರ್ಯಾಚರಣೆ ನಡೆಸುವ ತಡ ಪ್ರತಿ ದಿನ ಕಾರವಾರ ತಾಲೂಕಿಗೆ ಬರುತ್ತಿದೆ. ಎರಡು ತಂಡಗಳು ಇಲ್ಲಿ ಕಾರ್ಯಾಚರಿಸುತ್ತಿವೆ.