ಶಿರಸಿ:ಹುಬ್ಬಳ್ಳಿ ನವನಗರದಿಂದ ಯಲ್ಲಾಪುರದ ಶಿರ್ಲೆ ಫಾಲ್ಸ್ ವೀಕ್ಷಣೆಗೆ ಬಂದು ನಾಪತ್ತೆಯಾಗಿದ್ದ 6 ಯುವಕರು ಪತ್ತೆಯಾಗಿದ್ದಾರೆ. ಪ್ರವಾಸಿಗರು ಶಿರ್ಲೆ ಫಾಲ್ಸ್ಪಕ್ಕದ ಗ್ರಾಮವಾದ ಸುಣಜೋಗದ ರಾಘವೇಂದ್ರ ಭಟ್ ಎಂಬುವವರ ತೋಟದಲ್ಲಿ ಗುರುವಾರ ರಾತ್ರಿ ಆಶ್ರಯ ಪಡೆದಿದ್ದರು ಎನ್ನಲಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಆರು ಯುವಕರು ಮೂರು ಬೈಕ್ಗಳಲ್ಲಿ ಶಿರ್ಲೆ ಜಲಪಾತ ವೀಕ್ಷಣೆಗೆ ಬಂದಿದ್ದರು. ಜಲಪಾತಕ್ಕೆ ತೆರಳುವ ಮಾರ್ಗ ಮಧ್ಯೆ ಇದ್ದ ಕಾಲುಸಂಕ ಮರಳಿ ಬರುವಾಗ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಹೀಗಾಗಿ, ಹಳ್ಳವನ್ನು ದಾಟಿ ಬೈಕ್ ಇಟ್ಟಿರುವ ಸ್ಥಳಕ್ಕೆ ಬರಲಾಗದೇ ದಾರಿ ತಪ್ಪಿದ್ದಾರೆ. ಬಳಿಕ ಸಿಕ್ಕಿದ ಯಾವುದೋ ದಾರಿ ಹುಡುಕಿಕೊಂಡು ತೋಟದ ಬಳಿ ನಡುಗುತ್ತಾ ಕುಳಿತಿದ್ದ ಯುವಕರಿಗೆ ರಾಘವೇಂದ್ರ ಭಟ್ ಆಶ್ರಯ ನೀಡಿದ್ದರು. ಇಂದು ಬೆಳಗ್ಗೆ ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.