ಕಾರವಾರ: ಕಳೆದ ವರ್ಷ ಉದ್ಘಾಟನೆಗೆ ಸಜ್ಜಾಗಿ ರಾಜಕೀಯ ವೈಮನಸ್ಸಿನಿಂದಾಗಿ ಸ್ಥಗಿತಗೊಂಡಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರವೊಂದಕ್ಕೆ ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಇಂದು ಉದ್ಘಾಟನೆ ಭಾಗ್ಯ ಕಲ್ಪಿಸಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟಿಸಿದ ಸಚಿವ ಶಿವರಾಮ ಹೆಬ್ಬಾರ್ ಕಾರವಾರ ತಾಲೂಕಿನ ಅಮದಳ್ಳಿ ಗ್ರಾಮದಲ್ಲಿ ಸುಮಾರು 1.25 ಕೋಟಿ ರೂ. ವೆಚ್ಚದಲ್ಲಿ ಕಳೆದ ಕೆಲ ವರ್ಷಗಳ ಹಿಂದೆಯೇ ಆರೋಗ್ಯ ಕೇಂದ್ರವನ್ನು ನಿರ್ಮಿಸಲಾಗಿತ್ತು. ಆದರೆ ಕೆಲ ತಿಂಗಳ ಹಿಂದಷ್ಟೇ ಸಚಿವರು, ಸ್ಥಳೀಯ ಜನಪ್ರತಿನಿಧಿಗಳಿಗೆ ಮಾಹಿತಿ ನೀಡದೆ ಶಾಸಕಿ ರೂಪಾಲಿ ನಾಯ್ಕ ಒಬ್ಬರೇ ಆರೋಗ್ಯ ಕೇಂದ್ರ ಹಸ್ತಾಂತರಗೊಳ್ಳುವ ಮೊದಲೇ ಉದ್ಘಾಟಿಸಲು ಮುಂದಾಗಿದ್ದರು. ಈ ವೇಳೆ ಉದ್ಘಾಟನೆ ವಿಚಾರದಲ್ಲಿ ಕಾಂಗ್ರೆಸ್‌ನ ಜಿಲ್ಲಾ ಪಂಚಾಯತ್ ಸದಸ್ಯೆ ಚೈತ್ರಾ ಕೊಠಾರಕರ್ ಹಾಗೂ ಶಾಸಕಿ ರೂಪಾಲಿ ನಾಯ್ಕ ನಡುವೆ ವೈಮನಸ್ಸು ಏರ್ಪಟ್ಟಿದ್ದು, ಆರೋಗ್ಯ ಕೇಂದ್ರ ಉದ್ಘಾಟನೆ ಸ್ಥಗಿತಗೊಂಡಿತ್ತು.
ಇಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಉದ್ಘಾಟನೆ ಮಾಡಿ ಸ್ಥಳೀಯರಿಗೆ ಸೇವೆ ಲಭ್ಯವಾಗುವಂತೆ ಮಾಡಿದ್ದಾರೆ. ಅಮದಳ್ಳಿ ಗ್ರಾಮದ ಸುತ್ತಮುತ್ತ ಹತ್ತಾರು ಹಳ್ಳಿಗಳಿದ್ದು, ಸಾಕಷ್ಟು ಮಂದಿ ಆರೋಗ್ಯ ಸೇವೆ ಪಡೆದುಕೊಳ್ಳಲು ಬೇರೆ ಗ್ರಾಮ ಅಥವಾ ಊರುಗಳಿಗೆ ತೆರಳಬೇಕಾಗಿತ್ತು. ಇದೀಗ ಗ್ರಾಮದಲ್ಲೇ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಯಾಗಿರುವುದರಿಂದಾಗಿ ಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಚಿವ ಶಿವರಾಮ ಹೆಬ್ಬಾರ್ ಮನವಿ ಮಾಡಿದ್ದಾರೆ.
ಕಾರ್ಯಕ್ರಮಕ್ಕೆ ಸಚಿವರ ಜೊತೆಗೆ ಸ್ಥಳೀಯ ಜನಪ್ರತಿನಿಧಿಗಳು ಆಗಮಿಸಿದ್ದರಾದರೂ ಶಾಸಕಿ ರೂಪಾಲಿ ನಾಯ್ಕ ಮಾತ್ರ ಗೈರಾರಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಆ ರೀತಿ ಯಾವುದೇ ಸಮಸ್ಯೆಗಳಿಲ್ಲ. ಬೇರೆ ಕಾರ್ಯಕ್ರಮಕ್ಕೆ ಶಾಸಕಿ ತೆರಳಿದ್ದರಿಂದ ಆಗಮಿಸಿಲ್ಲ ಎಂದರು.