ಕಾರವಾರ :ಕಾರ್ಮಿಕರು, ಬಡವರ ಸೇವೆ ಮಾಡುವ ಅವಕಾಶವನ್ನು ನಾಡಿನ ಮುಖ್ಯಮಂತ್ರಿ ನನಗೆ ನೀಡಿದ್ದಾರೆ. ನಾನು ಕಾರ್ಮಿಕನಾಗಿ, ಡ್ರೈವರ್ ಆಗಿ ಕೆಲಸ ಮಾಡಿದವನು. ಕಾರ್ಮಿಕರನ್ನು ರಕ್ಷಣೆ ಮಾಡುವ ಜವಾಬ್ದಾರಿಯನ್ನು ಭಗವಂತ ನೀಡಿದ್ದಾನೆ. ಇದನ್ನು ಸಂತೋಷವಾಗಿ ನಿಭಾಯಿಸುತ್ತೇನೆ. ಕಾರ್ಮಿಕ ಇಲಾಖೆ ಖಾತೆಯಲ್ಲಿ ಸಾಕಷ್ಟು ತೃಪ್ತಿ ಹೊಂದಿದ್ದೇನೆ ಎಂದು ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.
ಸಚಿವ ಶಿವರಾಮ್ ಹೆಬ್ಬಾರ್ ಪ್ರತಿಕ್ರಿಯೆ ಕದ್ರಾ ಜಲಾಶಯದಿಂದ ನೀರು ಬಿಟ್ಟ ಪರಿಣಾಮ ನೆರೆ ಹಾವಳಿ ಸೃಷ್ಟಿಯಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಸಚಿವ ಶಿವರಾಮ್ ಹೆಬ್ಬಾರ್ ಇಂದು ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ತಾಲೂಕಿನ ಮಲ್ಲಾಪುರ, ಗಾಂಧಿನಗರ, ಕದ್ರಾ ಸೇರಿದಂತೆ ವಿವಿಧ ಪ್ರದೇಶಗಳಿಗೆ ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ, ಎಸ್ಪಿ ಹಾಗೂ ಇತರೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿದ ಅವರು ಸಂತ್ರಸ್ತರ ಸಮಸ್ಯೆ ಆಲಿಸಿದರು.
ಪ್ರತಿ ಬಾರಿ ನೀರು ಬಿಟ್ಟು ಹಾನಿಯಾದ ಪರಿಣಾಮ ಬದುಕು ಸಂಕಷ್ಟಕ್ಕೀಡಾಗಿದೆ. ಹಾಗಾಗಿ, ನಮಗೆ ಶಾಶ್ವತ ನೆಲೆ ಕಲ್ಪಿಸಿ ಎಂದು ಸ್ಥಳೀಯರು ಒತ್ತಾಯಿಸಿದರು. ಈ ವೇಳೆ ಸಂತ್ರಸ್ತರಿಗೆ ಸಾಂತ್ವನ ಹೇಳಿದ ಹೆಬ್ಬಾರ್, ಸೂಕ್ತ ಪರಿಹಾರದ ಜತೆಗೆ ಪ್ರತಿ ಬಾರಿ ನೀರು ತುಂಬುವ ಮನೆಗಳನ್ನು ಸ್ಥಳಾಂತರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡ್ಯಾಂ ನೀರು ಹರಿ ಬಿಡುವುದು ಅನಿವಾರ್ಯವಾದರೂ ಮೊದಲು ಸೂಚನೆ ನೀಡುವುದು ಅಗತ್ಯ. ರಾತ್ರಿ ವೇಳೆ ಮೇಲಿಂದ ಎಷ್ಟು ಪ್ರಮಾಣದಲ್ಲಿ ನೀರು ಬರುತ್ತದೆ ಎಂಬುದರ ಬಗ್ಗೆ ಲೆಕ್ಕಾಚಾರ ಸಿಗುವುದಿಲ್ಲ. ಕೆಲವೊಮ್ಮೆ ಇಂತಹ ತಪ್ಪುಗಳು ನಡೆಯುತ್ತವೆ. ಈ ಬಗ್ಗೆ ಅಧಿಕಾರಿಗಳ ಜತೆ ಸಭೆ ನಡೆಸುವುದಾಗಿ ತಿಳಿಸಿದರು.
ಫುಡ್ ಕಿಟ್ ವಿತರಣೆಯಲ್ಲಿ ನಿರ್ಲಕ್ಷ್ಯ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಸುಮಾರು 22 ಲಕ್ಷ ಜನರಿಗೆ ಫುಡ್ ಕಿಟ್ ನೀಡಿದ್ದೇವೆ. ಎಲ್ಲೋ ಒಂದೆರಡು ತಪ್ಪು, ಗೊಂದಲವಾಗಿದೆ. ಅದು ಆಗಬಾರದಿತ್ತಾದರೂ, ಸರಿಪಡಿಸುತ್ತೇವೆ ಎಂದರು.