ಕಾರವಾರ: ರೈತ ಪ್ರತಿಭಟನೆ ದುರದೃಷ್ಟಕರ. ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಈ ರೀತಿ ಟ್ರ್ಯಾಕ್ಟರ್ಗಳನ್ನು ತಂದು ತೊಂದರೆ ಕೊಡುತ್ತಿರುವುದು ಯಾವ ಸಂಘಟನೆಗೂ ಶೋಭೆ ತರುವಂಥದ್ದಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಓದಿ: ಕೃಷಿ ಕಾಯ್ದೆ ವಿರೋಧಿಸಿ ಎಲ್ಲೆಡೆ ಕಿಚ್ಚು: ನೇಗಿಲು ಹೊತ್ತ ವಾಟಾಳ್ ನಾಗರಾಜ್!
ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈತರು ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಬೇಕಾಗಿತ್ತು. ಇದು ಅವರ ಕರ್ತವ್ಯ. ಇದರಲ್ಲಿ ತಪ್ಪಿಲ್ಲ. ಆದರೆ, ರೈತರ ಪ್ರತಿಭಟನೆಯಲ್ಲಿ ಏನಾದರು ರಾಜಕೀಯ ಅಡಗಿದೆಯೋ ಎಂಬ ಬಗ್ಗೆ ತನಿಖೆ ಮಾಡಬೇಕಾದ ಅವಶ್ಯಕತೆ ಇದೆ. ರೈತರು ರಾಜಕೀಕರಣಕ್ಕೊಳಗಾಗಬಾರದು.
ರೈತರ ಬೇಡಿಕೆಗಳಿಗೆ ಸ್ಪಂದಿಸಬೇಕಾಗಿರುವುದು ನನ್ನ ಕರ್ತವ್ಯ. ಕೋವಿಡ್ನಂತಹ ವಿಷಮ ಪರಿಸ್ಥಿತಿಯಲ್ಲೂ 40 ಲಕ್ಷ ರೈತರಿಗೆ ಪರಿಹಾರಧನ ಕೊಟ್ಟಿದ್ದೇವೆ. ನಾವು ಯಾವುದೇ ರೈತರನ್ನೂ ಕಡೆಗಣಿಸುವಂತಹ ಕಾರ್ಯ ಮಾಡಿಲ್ಲ ಎಂದರು.
ಶೂನ್ಯ ಬಡ್ಡಿ ದರದಲ್ಲಿ ಸಾಲ, 5 ರೂ.ನಂತೆ ಹಾಲಿಗೆ ಸಬ್ಸಿಡಿ, ಭತ್ತವನ್ನು 1888 ರೂ. ಬೆಂಬಲ ಬೆಲೆಯಲ್ಲಿ ಖರೀದಿಸಲು ಉತ್ತರ ಕನ್ನಡದ ನಾಲ್ಕು ಕಡೆ ಕೇಂದ್ರಗಳನ್ನು ತೆರೆಯಲಾಗಿದೆ. ರೈತರ ಫಸಲು ಹಾಳಾದಾಗೆಲ್ಲ ಅವರ ಬೆಂಬಲಕ್ಕೆ ನಿಂತಿದ್ದೇವೆ. ರೈತಾಪಿ ಸಮುದಾಯಕ್ಕೆ ಕಷ್ಟ ಬಂದಾಗ, ಕಬ್ಬಿನ ಬೆಳೆಗಳ ಪ್ರಶ್ನೆ ಬಂದಾಗ 10,680 ಕೋಟಿ ರೂ. ಕಬ್ಬು ಬೆಳೆಗಾರರಿಗೆ ಖರ್ಚು ಮಾಡಲಾಗಿದೆ.
ಬೆಳೆಗಾರರಿಗೆ ನೀಡಬೇಕಾಗಿದ್ದ ಹಣದಲ್ಲಿ ಶೇ. 99ರಷ್ಟು ಪಾವತಿಯಾಗಿದೆ. ರೈತರ ವಿಚಾರ ಬಂದಾಗ ನಮ್ಮ ಸರ್ಕಾರ ಯಾವ ಕಾಲಕ್ಕೂ ಹಿಂದೆ ಬಿದ್ದಿಲ್ಲ. ರೈತರು 200 ಎಕರೆಯವರೆಗಿನ ತಮ್ಮ ಜಮೀನನ್ನು ಮಾರಾಟ ಮಾಡಲು ಯಾವುದೇ ಅನುಮತಿ ಬೇಕಾಗಿಲ್ಲ ಎಂಬ ಕಾಯ್ದೆ ಜಾರಿಗೆ ತರಲಾಗಿದೆ. ಆದಾಯ ತೆರಿಗೆಗೆ ಇದ್ದ 20 ಲಕ್ಷ ಮಿತಿಯನ್ನು ತೆಗೆದು ಹಾಕಲಾಗಿದೆ. ಇದರಿಂದ ತಮ್ಮ ಆಸ್ತಿಗಳೆಲ್ಲ ಹೋಗಿಬಿಡಬಹುದೆಂಬ ದುಗುಡ ಅವರಲ್ಲಿದೆ ಎಂದು ಹೇಳಿದರು.
ನಾವು ತಂದಿರುವ ಕಾನೂನು ರೈತ ಪರವಾದ ಕಾನೂನು ಎಂದು ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ರೈತ ಪರವಾಗಿಯೇ ಕೆಲಸ ಮಾಡುತ್ತೇವೆ ಎಂದರು.