ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅಧಿಕಾರಿಗಳ ಮುಂಜಾಗ್ರತಾ ಕ್ರಮದಿಂದ ಕೊರೊನಾ ವೈರಸ್ ನಿಯಂತ್ರಣದಲ್ಲಿದ್ದು, ಮುಂದಿನ ದಿನಗಳಲ್ಲಿ ರೈತರಿಗೆ, ಮೀನುಗಾರರಿಗೆ ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕ್ರಮ ಕೈಗೊಂಡಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.
ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಕೊರೊನಾ ತಡೆ ಬಗ್ಗೆ ಸಭೆ ನಡೆಸಿದ ಅವರು, ಕೃಷಿ ಚಟುವಟಿಕೆಗೆ ಯಾವುದೇ ತೊಂದರೆ ಆಗದಂತೆ ಮುಕ್ತವಾಗಿ ಅವಕಾಶ ನೀಡಲಾಗಿದೆ. ಇನ್ನು ಮೀನುಗಾರಿಕೆಗೂ ಸಹ ಕೇಂದ್ರ ಸರ್ಕಾರದ ನಿರ್ಣಯದಂತೆ ಜಿಲ್ಲೆಯಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಂಡು ನಡೆಸಲು ಅವಕಾಶ ನೀಡಲಾಗಿದೆ. ಅಡಿಕೆ ಸೇರಿದಂತೆ ಇತರೆ ಬೆಳೆಗಳನ್ನು ರೈತರು ದೇಶದ ಯಾವುದೇ ಭಾಗಗಳಿಗೆ ಸಾಗಿಸಲು ಅನುಮತಿಗಾಗಿ ಕಾಯಬೇಕಾಗಿಲ್ಲ. ಜಿಲ್ಲಾಧಿಕಾರಿ ಮೂಲಕ ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆ ಮೂಲಕವೂ ಅನುಮತಿ ಪಡೆದುಕೊಳ್ಳಬಹುದು ಎಂದರು.
ಇನ್ನು ಘಟ್ಟದ ಕೆಳಗೆ ಕಲ್ಲಂಗಡಿ, ಘಟ್ಟದ ಮೇಲ್ಭಾಗದಲ್ಲಿ ಅನಾನಸ್, ಬಾಳೆಹಣ್ಣು, ಪಪ್ಪಾಯ ಸಾಕಷ್ಟು ಪ್ರಮಾಣದಲ್ಲಿದೆ. ಆದರೆ ಕೊಳ್ಳುವವರು ಇಲ್ಲದ ಕಾರಣ ಸುಮಾರು 12 ಸಾವಿರ ಟನ್ ಅನಾನಸ್ ಹಾಗೆಯೇ ಇದೆ. ಈ ಬಗ್ಗೆ ಅಧಿಕಾರಿಗಳ ಜೊತೆ ಮಾತಾಡಿದ್ದು, ಈ ವಾರದಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.