ಶಿರಸಿ :ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಯಲ್ಲಾಪುರದ ವಿವಿಧ ಭಾಗದಲ್ಲಿ ಅಪಾರ ಹಾನಿ ಉಂಟಾಗಿದ್ದು, ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ನೆರೆಯಿಂದ ಹಾನಿ ಉಂಟಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನೆರೆಯಿಂದ ಹಾನಿ ಉಂಟಾದ ಸ್ಥಳಕ್ಕೆ ಸಚಿವ ಶಿವರಾಮ ಭೇಟಿ ತಾಲೂಕಿನ ಕಳಚೆ ಭಾಗದಲ್ಲಿ ಹೆಚ್ಚಿನ ಹಾನಿ ಉಂಟಾಗಿದ್ದು, ಗುಳ್ಳಾಪುರ ಸೇತುವೆಯೂ ನದಿಯಲ್ಲಿ ಕೊಚ್ಚಿ ಹೋಗಿದೆ. ಇದಲ್ಲದೇ ಕಳಚೆಯಲ್ಲಿ ಮಣ್ಣು ಕುಸಿದು ದೇವಕಿ ಗಾಂವ್ಕರ್ ಎಂಬುವರು ಮೃತಪಟ್ಟಿದ್ದು, ಅವರಿಗೆ ಕೇವಲ ಒಂದು ದಿನದಲ್ಲಿ 5 ಲಕ್ಷ ರೂ. ಪರಿಹಾರ ಒದಗಿಸಲಾಯಿತು.
ಕಳಚೆ ಭಾಗದಲ್ಲಿ ಸಾರ್ವಜನಿಕರಿಗೆ ನೂತನ ರಸ್ತೆ ಸಂಪರ್ಕ ಕಲ್ಪಿಸುವುದರ ಬಗ್ಗೆ ಹಾಗೂ ಕುಸಿದಿರುವ ಮಣ್ಣನ್ನು ತೆಗೆದು ತಾತ್ಕಾಲಿಕವಾಗಿ ರಸ್ತೆ ನಿರ್ಮಾಣ ಕುರಿತಂತೆ ಗ್ರಾಮಸ್ಥರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಸಲಹೆ ಸೂಚನೆಗಳನ್ನು ಸಚಿವರು ನೀಡಿದರು. ಬಳಿಕ ಸಂತ್ರಸ್ತರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸಿ ಸಾಂತ್ವನ ಹೇಳಿದರು.
ನೆರೆಯಿಂದ ಹಾನಿ ಉಂಟಾದ ಸ್ಥಳಕ್ಕೆ ಸಚಿವ ಶಿವರಾಮ ಭೇಟಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಈಗಾಗಲೇ 300 ಕೋಟಿಗೂ ಹೆಚ್ಚು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಇದು ಕೇವಲ ಶೇ. 25 ರಷ್ಟು ಮಾತ್ರ. ಇನ್ನೂ ಕೂಡ ಹಲವು ಪ್ರದೇಶಗಳ ಹಾನಿಯ ವಿವರ ಸಿಕ್ಕಿಲ್ಲ. ಯಲ್ಲಾಪುರದ ಕಳಚೆಯಲ್ಲಿ ಹಿಂದೆಂದೂ ಕಾಣದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲಿಗೆ ಹೋಗೋಕೆ ಕೂಡ ಸಾಧ್ಯವಾಗುತ್ತಿಲ್ಲ. ಆದರೆ, ಪ್ರವಾಹದ ಹಾನಿ ಕುರಿತು ವರದಿಯನ್ನು ತಯಾರಿಸಲು ಹೇಳಿದ್ದೇವೆ. ಎಲ್ಲಾ ಇಲಾಖೆಗಳಿಗೆ ತುಂಬಾ ಹಾನಿಯಾಗಿದೆ ಎಂದರು.
ಜಿಲ್ಲೆಯಲ್ಲಿ 3 ಸಾವು:
ಜಿಲ್ಲೆಯಲ್ಲಿ ಮೂರು ಸಾವು ಸಂಭವಿಸಿದೆ. ಮೃತ ಕುಟುಂಬಗಳಿಗೆ ಸರ್ಕಾರದಿಂದ ನಿನ್ನೆಯೇ ಪರಿಹಾರ ಕೊಡಲಾಗಿದೆ. ಒಟ್ಟು ಹಾನಿಯ ವರದಿ ತಯಾರಿಸಿ ಸರ್ಕಾರಕ್ಕೆ ನೀಡುತ್ತೇವೆ ಎಂದು ತಿಳಿಸಿದರು.
ಓದಿ: ಬೆಳಗಾವಿಯಲ್ಲಿ ಮಳೆ ಅವಾಂತರ: ಆಸ್ಪತ್ರೆ ಒಳಗಿದ್ದ ರೋಗಿಗಳ ಪರದಾಟ