ಕಾರವಾರ:ರೈತರಿಗಾಗಿಯೇ ಕೃಷಿ ಕಾಯ್ದೆ ಜಾರಿ ಮಾಡಲಾಗಿದೆ. ಆದರೆ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ಇದೀಗ ರೈತರನ್ನು ಎತ್ತಿಕಟ್ಟುವ ಮೂಲಕ ಹಿಂಬಾಗಿಲಿನಿಂದ ರಾಜಕೀಯ ಮಾಡುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಪ್ರೇರಿತ ಪರೇಡ್ ಮೆರವಣಿಗೆಗೆ ಸರ್ಕಾರ ಬಗ್ಗಲ್ಲ: ಸಚಿವ ಆರ್. ಅಶೋಕ್ - ಕೃಷಿ ಕಾಯ್ದೆ
ಕಾಂಗ್ರೆಸ್ ಹಿಂಬಾಗಿಲಿನ ಮೂಲಕ ರೈತರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಪ್ರೇರಿತ ರೈತರ ಪರೇಡ್ ಮೆರವಣಿಗೆಗೆ ಸರ್ಕಾರ ಬಗ್ಗಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಭಟ್ಕಳದಲ್ಲಿ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಗಳು ರೈತರ ಪರವಾಗಿವೆ. ಆದರೆ ಇದರ ವಿರುದ್ಧ ಕೆಲ ದಿನಗಳ ಹಿಂದೆ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ಇದೀಗ ಪ್ರತಿಭಟನೆಗೆ ಕುಮ್ಮಕ್ಕು ನೀಡಿರುವುದು ಪಕ್ಕಾ ಆಗಿದೆ. ಇಂತಹ ಕಾಂಗ್ರೆಸ್ ಪ್ರೇರಿತ ಪ್ರತಿಭಟನೆಗಳಿಗೆ ಯಾರೂ ಕೂಡ ಬೆಲೆ ಕೊಡಬೇಕಾದ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಹಿಂಬಾಗಿಲಿನ ಮೂಲಕ ರೈತರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದೆ. ರೈತರ ಪರೇಡ್ ಮೆರವಣಿಗೆಗೆ ಸರ್ಕಾರ ಬಗ್ಗಲ್ಲ ಎಂದು ಹೇಳಿದರು.
ಇನ್ನು ಆನಂದ ಸಿಂಗ್ ರಾಜೀನಾಮೆ ಗುಮಾನಿ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಆನಂದ ಸಿಂಗ್ ಒಮ್ಮೆಲೇ ತೀರ್ಮಾನ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಆನಂದ ಸಿಂಗ್ ರಾಜೀನಾಮೆ ಕೊಟ್ಟಿದ್ದಾರೋ, ಕೊಟ್ಟಿಲ್ಲವೋ ನನಗೆ ಇನ್ನು ಸ್ಪಷ್ಟವಾಗಿ ಗೊತ್ತಾಗಿಲ್ಲ. ಈ ಬಗ್ಗೆ ನಾನು ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿ ಮುಖ್ಯಮಂತ್ರಿಗಳ ಜೊತೆ ಮಾತಾಡುತ್ತೇವೆ. ಅಲ್ಲದೆ ಈ ಬಗ್ಗೆ ಆನಂದಸಿಂಗ್ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.