ಶಾಸಕ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ಗೆ ಮರಳುವ ಬಗ್ಗೆ ಸಚಿವ ಮಂಕಾಳ ವೈದ್ಯ ಪ್ರತಿಕ್ರಿಯೆ ಕಾರವಾರ (ಉತ್ತರ ಕನ್ನಡ): ಬಿಜೆಪಿಯವರಿಗೆ ತಲೆನೇ ಇಲ್ಲ. ಇನ್ನು ತಲೆ ಕೆಡಿಸಿಕೊಳ್ಳುವುದು ಎಲ್ಲಿಂದ. ಅವರಿಗೆ ತಲೆ ಇದ್ದಿದ್ದರೆ ಕಳೆದ ಬಾರಿ ಶಾಸಕರನ್ನು ಕರೆದುಕೊಂಡು ಹೋಗುತ್ತಿರಲಿಲ್ಲ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ವ್ಯಂಗ್ಯವಾಡಿದ್ದಾರೆ.
ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಮರಳಿ ಕಾಂಗ್ರೆಸ್ಗೆ ಬರುತ್ತಾರಾ? ಎಂಬ ಮಾಧ್ಯಮಗಳ ಪ್ರಶ್ನೆಗೆ ಕಾರವಾರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ರಾಜಕಾರಣಕ್ಕೆ ಬರುವ ಮುಂಚೆ ಕಾಂಗ್ರೆಸ್ ಸಮುದ್ರ ಎಂದು ನನಗೆ ಕೆಲವರು ಹೇಳುತ್ತಿದ್ದರು. ಈಗಲೂ ಅದನ್ನೇ ಹೇಳುತ್ತಾರೆ. ಮುಂದೆಯೂ ಸಮುದ್ರವೇ. ಇಲ್ಲಿಗೆ ಯಾರು ಬರುತ್ತಾರೆ. ಯಾರು ಹೋಗುತ್ತಾರೆನ್ನುವುದು ನನ್ನ ಗಮನಕ್ಕೆ ಬಂದಿಲ್ಲ ಎಂದರು.
ಉದಾಹರಣೆಗೆ, ಮಂಕಾಳ ವೈದ್ಯನಾದ ನನ್ನ ಸಚಿವರನ್ನಾಗಿ ಮಾಡಲು ತೀರ್ಮಾನ ತೆಗೆದುಕೊಂಡಿದ್ದು ಮುಖಂಡರು. ಯಾರು ಬರಬೇಕೋ, ಬೇಡವೋ ಎನ್ನುವುದನ್ನು ಮುಖಂಡರು, ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಮುಖಂಡರ ತೀರ್ಮಾನಕ್ಕೆ ನಾನು ಬದ್ಧ. ಇದರಲ್ಲಿ ವೈಯಕ್ತಿಕ ಎನ್ನುವುದು ಏನೂ ಇಲ್ಲ ಎಂದಿದ್ದಾರೆ.
ಹೆಬ್ಬಾರ್ ಕಾಂಗ್ರೆಸ್ ಬರುವುದನ್ನು ವಿರೋಧಿಸಿ ನೀಡಿರುವ ಭೀಮಣ್ಣ ನಾಯ್ಕರ ಹೇಳಿಕೆ ವೈಯಕ್ತಿಕವೋ, ಪಕ್ಷದ್ದೋ ಗೊತ್ತಿಲ್ಲ. ಅವರ ಅಭಿಪ್ರಾಯ ಅವರು ಹೇಳಿದ್ದಾರೆ. ನಾನೊಬ್ಬ ಜವಾಬ್ದಾರಿ ಸ್ಥಾನದಲ್ಲಿದ್ದು ಏನನ್ನೂ ಹೇಳಲು ತಯಾರಿಲ್ಲ. ಭೀಮಣ್ಣರ ಹೇಳಿಕೆ ಸರಿಯೋ, ತಪ್ಪೋ ಎಂದು ಹೇಳುವುದೂ ಇಲ್ಲ. ನನ್ನ ತೀರ್ಮಾನ ಇಷ್ಟೇ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ. ಶಿವರಾಮ ಹೆಬ್ಬಾರ್ 10 ವರ್ಷಗಳಿಂದ ನನಗೆ ಆತ್ಮೀಯ ಸ್ನೇಹಿತರು. ಅವರು ಸಚಿವರಾಗಿದ್ದಲೂ ನಮ್ಮ ಸ್ನೇಹ ಹಾಳಾಗಿಲ್ಲ. ನಾನು ಸಚಿವನಾದಾಗಲೂ ಸ್ನೇಹ ಹಾಗೇ ಇದೆ. ಸ್ನೇಹ ಬೇರೆ, ರಾಜಕಾರಣ, ಪಕ್ಷ ಬೇರೆ. ನನ್ನ ಬಳಿ ಪಕ್ಷ ಸೇರ್ಪಡೆ ಬಗ್ಗೆ ಯಾವುದೇ ವಿಚಾರ ಚರ್ಚೆ ಮಾಡಿಲ್ಲ. ಅಭಿವೃದ್ಧಿ ವಿಚಾರವಾಗಿ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಅದರ ಹೊರತುಪಡಿಸಿ ಬೇರೇನೂ ಮಾತನಾಡಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ನ 136 ಸೀಟೂ ಡಿಕೆಶಿ, ಸಿದ್ದರಾಮಯ್ಯರ ಟೀಮ್. ಕಾಂಗ್ರೆಸ್ನವರ ಟೀಮ್. ಅದರಲ್ಲಿ ಆ ಟೀಮ್, ಈ ಟೀಮ್ ಎಂದಿಲ್ಲ. ಎಲ್ಲರೂ ಒಂದಾಗಿ ಕೆಲಸ ಮಾಡುತ್ತೇವೆ. ಡಿಕೆಶಿಯವರನ್ನ ಮುಖ್ಯಮಂತ್ರಿಯನ್ನಾಗಿ ಮಾಡಲು ಹೈಕಮಾಂಡ್ ತೀರ್ಮಾನಿಸಿದರೆ, ನಾವು 136 ಶಾಸಕರೂ ಅದಕ್ಕೆ ಬದ್ಧರಾಗಿ ಅವರನ್ನು ಸಿಎಂ ಮಾಡುತ್ತೇವೆ. ಪಕ್ಷದ ಮುಖಂಡರು ಸಿಎಂ ಮಾಡಬೇಕೆಂದರೆ, ಅವರ ತೀರ್ಮಾನಕ್ಕೆ ನಮ್ಮ ಸಹಕಾರವಿದೆ. ಅವರ ತೀರ್ಮಾನವೇ ಅಂತಿಮ ಎಂದರು.
ಶಿವರಾಮ ಹೆಬ್ಬಾರ್ ದೊಡ್ಡೋರಿದ್ದಾರೆ. ನಮ್ಮ ಕಾಂಗ್ರೆಸ್ ಪಕ್ಷ ಸಮುದ್ರ. ಬರುವವರಿರುತ್ತಾರೆ, ಹೋಗುವವರೂ ಇರುತ್ತಾರೆ. ಕಾಂಗ್ರೆಸ್ನಲ್ಲಿ ಅವ್ರಿಗೆ ಹೇಗೆ ಇರಬೇಕು ಅನ್ನಿಸುತ್ತೋ ಹಾಗೆ ಸ್ವತಂತ್ರವಾಗಿರಲು ಅವಕಾಶ ಇದೆ. ಅವರಿಗೆ ಇದೆಲ್ಲ ಈಗ ಜ್ಞಾನೋದಯ ಆಗಿರಬೇಕು ಎಂದಿದ್ದಾರೆ.
ಶಾಸಕ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ಗೆ ಮರಳುವ ಬಗ್ಗೆ ಶಾಸಕ ಸತೀಶ್ ಸೈಲ್ ಪ್ರತಿಕ್ರಿಯೆ ಹೆಬ್ಬಾರ್ ಕಾಂಗ್ರೆಸ್ಗೆ ಬರುವುದು ಅಷ್ಟು ಸುಲಭವಿಲ್ಲ- ಶಾಸಕ ಸತೀಶ್ ಸೈಲ್ :ಶಿವರಾಮ್ ಹೆಬ್ಬಾರ್ ಅವರು ಕಾಂಗ್ರೆಸ್ಗೆ ಬರಲು ಅಷ್ಟು ಸುಲಭವಿಲ್ಲ. ಅವರು ಬಿಜೆಪಿಗೆ ನಿಷ್ಠರಾಗಿ ಹೆಸರು ಮಾಡಿದ್ದಾರೆ. ಅವರು ಮತ್ತೆ ಕಾಂಗ್ರೆಸ್ಗೆ ಬರುತ್ತಾರೆಂದರೆ ನನಗಂತೂ ನಂಬಿಕೆಯಿಲ್ಲ ಎಂದು ಶಾಸಕ ಸತೀಶ್ ಸೈಲ್ ಹೇಳಿದ್ದಾರೆ.
ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿವರಾಮ ಹೆಬ್ಬಾರ್ ಕಾಂಗ್ರೆಸ್ಗೆ ಬರ್ತಾರೆಂದು ಅವರು ಎಲ್ಲೂ ಹೇಳಿಲ್ಲ. ಅಧಿಕೃತವಾಗಿ ಬರಲಿ, ಆಮೇಲೆ ಉತ್ತರ ನೀಡುತ್ತೇನೆ. ನಾವು ಸದಸ್ಯರಷ್ಟೇ, ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಹೆಬ್ಬಾರ್ ಅವರು ಬರಲು ಅಷ್ಟು ಸುಲಭವಿಲ್ಲ. ಅವರು ಹಾಗೇನಾದರೂ ಇದ್ದರೆ ನಮ್ಮೊಂದಿಗೆ ಚರ್ಚೆ ಮಾಡುತ್ತಿದ್ದರು. ನನ್ನ ಬಳಿಯಂತೂ ಈವರೆಗೆ ಚರ್ಚೆ ಮಾಡಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ:ಕಾಂಗ್ರೆಸ್ ಸೇರುವ ಯಾವುದೇ ಚರ್ಚೆ, ಸಭೆಯಲ್ಲಿ ನಾನು ಭಾಗವಹಿಸಿಲ್ಲ: ಬಿಜೆಪಿ ಶಾಸಕ ಹೆಬ್ಬಾರ್