ಕಾರವಾರ (ಉತ್ತರ ಕನ್ನಡ): ಹೊನ್ನಾವರ ಭಾಗದ 9 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಮಹತ್ತರವಾದ ಯೋಜನೆ ನೆನೆಗುದಿಗೆ ಬಿದ್ದಿದ್ದು, ಕುಡಿಯುವ ನೀರಿನ ಸಮಸ್ಯೆಯಿಂದ ಜನತೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಆದರೆ ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡ ಯೋಜನೆಯ ಕಾಮಾಗಾರಿ ಆರಂಭಕ್ಕೆ ನಗರಾಭಿವೃದ್ಧಿ ಸಚಿವ ಚಾಲನೆ ನೀಡಿದ್ದು, ಒಂದೇ ಯೋಜನೆಗೆ ಎರಡು ಬಾರಿ ಅಡಿಗಲ್ಲು ಹಾಕಿರುವುದು ಚರ್ಚೆಗೆ ಕಾರಣವಾಗಿದೆ.
ಹೊನ್ನಾವರದ ಪಟ್ಟಣದ ಪ್ರಭಾತನಗರದಲ್ಲಿಂದು ಶರಾವತಿ ನದಿಯಿಂದ ಹೊನ್ನಾವರ ಪಟ್ಟಣ ಹಾಗೂ ತಾಲೂಕಿನ 9 ಗ್ರಾಮಗಳಿಗೆ ನೀರು ಪೂರೈಕೆ ಮಾಡುವ ಯೋಜನೆ ಕಾಮಗಾರಿಗೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಚಾಲನೆ ನೀಡಿದ್ದಾರೆ.
ಹೊನ್ನಾವರದ 9 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ದೀಪದ ಕೆಳಗೆ ಕತ್ತಲೆ ಎನ್ನುವಂತೆ ಹೊನ್ನಾವರ ಪಟ್ಟಣದಲ್ಲೇ ಶರಾವತಿ ನದಿ ಹರಿದು ಸಮುದ್ರ ಸೇರುತ್ತಿದ್ದರೂ ಸಹ ಹಲವು ವರ್ಷಗಳಿಂದ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಈ ನಿಟ್ಟಿನಲ್ಲಿ ಪಟ್ಟಣ ಹಾಗೂ ಈ ಭಾಗದ 9 ಗ್ರಾಮಗಳಿಗೆ ನೀರು ಪೂರೈಕೆ ಮಾಡುವ ಶರಾವತಿ ನದಿ ಮೂಲದಿಂದ ನೀರನ್ನು ಪೂರೈಸುವ ಯೋಜನೆ ರೂಪಿಸಲಾಗಿತ್ತು. 2017ರಲ್ಲೇ ರೂಪಿಸಲಾಗಿದ್ದ ಈ ಯೋಜನೆ ಇಷ್ಟು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು ಇದೀಗ ಎಲ್ಲ ತೊಡಕುಗಳನ್ನು ನಿವಾರಿಸುವ ಮೂಲಕ ಯೋಜನೆಗೆ ಚಾಲನೆ ನೀಡಲಾಗಿದೆ. ಸುಮಾರು 123 ಕೋಟಿ ರೂ. ವೆಚ್ಚದ ಈ ಯೋಜನೆಯನ್ನು ಮೂರು ವರ್ಷಗಳಲ್ಲೇ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ.
2017ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯ ಹೊನ್ನಾವರಕ್ಕೆ ಆಗಮಿಸಿದ್ದ ವೇಳೆ ಇದೇ ಯೋಜನೆಗೆ ಅಡಿಗಲ್ಲು ಹಾಕಿದ್ದರು. ಆದರೆ ಇದಾದ ಬಳಿಕ ಅರಣ್ಯ ಇಲಾಖೆಯಿಂದ ಅನುಮತಿ ಸಿಗದೇ ಯೋಜನೆ ಪ್ರಾರಂಭವಾಗದೇ ನೆನೆಗುದಿಗೆ ಬಿದ್ದಿತ್ತು. ಇದೀಗ ಕಾಮಗಾರಿಗೆ ಚಾಲನೆ ನೀಡುವ ಭರದಲ್ಲಿ ಶಾಸಕ ದಿನಕರ ಶೆಟ್ಟಿ ತಾವೇ ಯೋಜನೆಯನ್ನು ತಂದಿರುವುದಾಗಿ ಬೃಹತ್ ಬ್ಯಾನರ್ ಅಳವಡಿಸುವ ಮೂಲಕ ಪ್ರಚಾರ ಪಡೆದುಕೊಂಡಿದ್ದು ಕಾಂಗ್ರೆಸ್ ಮುಖಂಡರಿಂದ ಟೀಕೆಗೂ ಗುರಿಯಾಗಿದೆ.
ಉದ್ಘಾಟನೆ ಬಳಿಕ ವೇದಿಕೆಯಲ್ಲೇ ಬಿಜೆಪಿ ಶಾಸಕ ದಿನಕರ ಶೆಟ್ಟಿ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, ನಾನೂ ಒಬ್ಬ ರಾಜಕಾರಣಿ. ಒಳ್ಳೆಯ ಕೆಲಸ ಮಾಡಬೇಕು ಎನ್ನುವ ಹುಮ್ಮಸ್ಸಿನಲ್ಲಿ ನಾನೂ ಸಹ ರಾಜಕಾರಣ ಮಾಡಬೇಕಾಗುತ್ತದೆ ಅಂತಾ ಟೀಕಾಕಾರರಿಗೆ ಉತ್ತರಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು ನೂತನ ಮೇಯರ್ ಆಗಿ ಪ್ರೇಮಾನಂದ ಶೆಟ್ಟಿ, ಉಪಮೇಯರ್ ಆಗಿ ಸುಮಂಗಳಾ ಆಯ್ಕೆ