ಕಾರವಾರ :ಬೇಸಿಗೆ ಬಂತು ಅಂದ್ರೆ ಸಾಕು ಆ ಗ್ರಾಮಗಳಿಗೆ ಕುಡಿಯುವ ನೀರಿನ ಬವಣೆ ಪ್ರಾರಂಭವಾಗುತ್ತಿತ್ತು. ಈ ಅವಧಿಯಲ್ಲಿ 10ಕ್ಕೂ ಹೆಚ್ಚು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕಾದ ಪರಿಸ್ಥಿತಿಯಿದೆ. ಶಾಶ್ವತ ಪರಿಹಾರ ಒದಗಿಸುವಂತೆ ಸಾಕಷ್ಟು ವರ್ಷಗಳಿಂದ ಬೇಡಿಕೆಯಿಟ್ಟಿದ್ದರು. ಅದರಂತೆ ಕಳೆದ ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಸುಮಾರು 28 ಕೋಟಿ ರೂ.ವೆಚ್ಚದ ಯೋಜನೆ ಇದೀಗ ಪೂರ್ಣಗೊಂಡಿದೆ. ನಿನ್ನೆ (ಸೋಮವಾರ) ಸಚಿವರಿಂದ ಚಾಲನೆಗೊಂಡಿದೆ.
ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಚಿವ ಕೆ ಎಸ್ ಈಶ್ವರಪ್ಪ ಚಾಲನೆ ನೀಡಿರುವುದು.. ಉತ್ತರ ಕನ್ನಡದ ಅಂಕೋಲಾ ತಾಲೂಕಿನ ಬಳಲೆ ಗ್ರಾಮದಲ್ಲಿ ನಿರ್ಮಾಣವಾಗಿರುವ ಕುಡಿಯುವ ನೀರಿನ ಯೋಜನೆಯನ್ನ ಲೋಕಾರ್ಪಣೆಗೊಳಿಸಲಾಯಿತು. ಜಲ ಜೀವನ್ ಮಿಷನ್ ಅಡಿಯಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಮನೆ ಮನೆಗೆ ನಳದ ಮೂಲಕ ನೀರು ಪೂರೈಸುವ ಬರೋಬ್ಬರಿ ₹28.05 ಕೋಟಿ ವೆಚ್ಛದ ಯೋಜನೆ ಇದಾಗಿದೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ನೀರು ಪೂರೈಕೆ ಪ್ರಾರಂಭಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದರು.
ಈ ಯೋಜನೆಯಡಿ ಎರಡು ತಾಲೂಕುಗಳಿಗೆ ನೀರು ಪೂರೈಕೆಯಾಗಲಿದೆ. ಒಟ್ಟು 9 ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯನ್ನು ಹೊಂದಿದೆ. ಸುಮಾರು 24.50 ಕೋಟಿ ವೆಚ್ಛದಲ್ಲಿ ಕುಮಟಾ ತಾಲೂಕಿನ ಗೋಕರ್ಣ, ತೊರ್ಕೆ, ಹಿರೇಗುತ್ತಿ, ಬರ್ಗಿ, ಹನೇಹಳ್ಳಿ ಹಾಗೂ ನಾಡುಮಾಸ್ಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ.
3.55 ಕೋಟಿ ವೆಚ್ಛದಲ್ಲಿ ಅಂಕೋಲಾ ತಾಲೂಕಿನ ಸಗಡಗೇರಿ, ಮೊಗಟಾ ಮತ್ತು ಅಗ್ರಗೋಣ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಗ್ರಾಮಗಳಿಗೆ ನಳದ ಮೂಲಕ ಕುಡಿಯುವ ನೀರನ್ನ ಈ ಯೋಜನೆ ಒದಗಿಸಲಿದೆ. ಸರ್ಕಾರ ಗ್ರಾಮೀಣ ಜನರಿಗೆ ಕುಡಿಯುವ ನೀರು ಒದಗಿಸಲು ಬದ್ಧವಾಗಿದೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ಜಲ ಜೀವನ್ ಮಿಷನ್‌ನ ಈ ಯೋಜನೆಯಡಿ 2 ತಾಲೂಕುಗಳ 9 ಗ್ರಾಮ ಪಂಚಾಯತ್ ವ್ಯಾಪ್ತಿಯ ಹತ್ತೂವರೆ ಸಾವಿರ ಮನೆಗಳಿಗೆ ನಳದ ಮೂಲಕ ಕುಡಿಯುವ ನೀರನ್ನ ಪೂರೈಕೆ ಮಾಡುವ ಗುರಿ ಹೊಂದಲಾಗಿದೆ. ಈಗಾಗಲೇ ಐದೂವರೆ ಸಾವಿರ ಮನೆಗಳಿಗೆ ನಳದ ಸಂಪರ್ಕ ಒದಗಿಸುವ ಕಾರ್ಯ ಪೂರ್ಣಗೊಂಡಿದೆ. ಇನ್ನೂ ಕೆಲವು ಕಡೆಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಪ್ರತಿ ವರ್ಷ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗುತ್ತಿದ್ದ ಗ್ರಾಮಗಳಿಗೆ ಈ ಬಾರಿ ನಳದ ಮೂಲಕ ಮನೆ ಮನೆಯ ಬಾಗಿಲಿಗೆ ನೀರು ತಲುಪುವಂತಾಗಿದೆ.
ಈ ಹಿಂದೆ ಟ್ಯಾಂಕರ್ ಮೂಲಕ ನೀರು ಪೂರೈಕೆಯಾಗುತ್ತಿದ್ದ ಸಂದರ್ಭದಲ್ಲಿ ಹಲವೆಡೆ ಅವ್ಯವಹಾರ ಉಂಟಾಗಿ ಗ್ರಾಮಸ್ಥರು ನೀರಿಗಾಗಿ ಪರದಾಡಬೇಕಾದ ಸ್ಥಿತಿ ಎದುರಾಗುತ್ತಿತ್ತು. ಆದ್ರೆ, ಈ ಬಾರಿ ಬೇಸಿಗೆಯಲ್ಲೂ ನೀರಿಗೆ ಯಾವುದೇ ತೊಂದರೆ ಇಲ್ಲ. ಇನ್ನುಳಿದ ಮನೆಗಳಿಗೂ ಶೀಘ್ರದಲ್ಲಿ ನಳದ ಸಂಪರ್ಕ ಒದಗಿಸಿಕೊಟ್ಟಲ್ಲಿ ಯೋಜನೆ ಸಾಕಾರವಾಗಲಿದೆ ಅಂತಾರೆ ಸ್ಥಳೀಯರು.
ಇದನ್ನೂ ಓದಿ:ಕೊಳ್ಳೆಗಾಲದಿಂದ ಔರಾದ್ ವರೆಗೆ ಎಲ್ಲಾ ನೀರಾವರಿ ಯೋಜನೆ ಪೂರ್ಣಗೊಳಿಸಲು ಯತ್ನಿಸುತ್ತೇವೆ: ಸಚಿವ ಕಾರಜೋಳ