ಕಾರವಾರ: ಯುದ್ಧಪಿಡಿತ ಉಕ್ರೇನ್ನಲ್ಲಿ ಸಿಲುಕಿದವರನ್ನು ತಾಯ್ನಾಡಿಗೆ ಕರೆತರುವಲ್ಲಿ ಭಾರತ ಮೊದಲಿಗನಾಗಿದ್ದು, ಇತರೆ ದೇಶಗಳು ಇದೀಗ ನಮ್ಮ ದೇಶವನ್ನು ಹೊಗಳುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಕ್ರೇನ್‌ನ ಖಾರ್ಕೀವ್‌ನಿಂದ ಹೊರಬರಲು ಭಾರತೀಯ ರಾಯಭಾರಿಗಳು ಸಹಾಯ ಮಾಡಿಲ್ಲ ಎಂದು ತಾಯ್ನಾಡಿಗೆ ಮರಳಿದ ವಿದ್ಯಾರ್ಥಿಯೋರ್ವ ಹೇಳಿಕೆ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಉಕ್ರೇನ್ ಅನ್ನೋದು ಸಮಾರಂಭದ ಮನೆಯಲ್ಲ. ಅದು ಯುದ್ಧಭೂಮಿ. ಎಲ್ಲಿ ಯಾವಾಗ ಬಾಂಬ್ ಬೀಳುತ್ತೆ ಅನ್ನೋದು ಗೊತ್ತಿಲ್ಲ. ಅದು ಬಡಿದಾಡುವ ನೆಲ. ಆ ನೆಲದಿಂದ ತೆಗೆದುಕೊಂಡು ಬಂದ ಯಾವುದೋ ಒಬ್ಬ ವಿದ್ಯಾರ್ಥಿ ಯಾವುದೋ ಪೂರ್ವಗ್ರಹದಿಂದ ಏನೋ ಹೇಳಿದ್ದಾನೆ ಅನ್ನೋದನ್ನು ಬಿಟ್ಟರೆ, ಇವತ್ತು ಪ್ರಪಂಚದ ಎಲ್ಲಾ ದೇಶಗಳು ಭಾರತವನ್ನು ಹೊಗಳುತ್ತಿವೆ ಎಂದು ಹೇಳಿದ್ದಾರೆ.
ನಾವು ಭಾರತದಲ್ಲಿದ್ದವರಾಗಿದ್ದರೆ ನಮಗೆ ರಕ್ಷಣೆ ಸಿಗುತ್ತಿತ್ತು. ನಾವ್ಯಾಕೆ ಭಾರತದಲ್ಲಿ ಹುಟ್ಟಿಲ್ಲ ಎಂಬ ನೋವಿದೆ ಎಂಬುದನ್ನ ಇತರೆ ದೇಶಗಳ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ಯಾರೋ ಒಬ್ಬ ವಿದ್ಯಾರ್ಥಿ ಏನೋ ಮಾತನಾಡಿದ್ದಾನೆಂದು ನಾನು ಅದರ ಬಗ್ಗೆ ಪ್ರತಿಕ್ರಿಯಿಸಲ್ಲ. ಇಡೀ ಪ್ರಪಂಚದಲ್ಲಿ ಪ್ರಥಮವಾಗಿ ಕಾರ್ಯಾಚರಣೆಗಿಳಿದು ತನ್ನ ದೇಶದವರನ್ನ ರಕ್ಷಣೆ ಮಾಡಿದೆ ಎಂದಿದ್ದರೆ ಅದು ಭಾರತ, ಭಾರತದ ಪ್ರಧಾನಿ ನರೇಂದ್ರ ಮೋದಿ ಎಂದರು.