ಶಿರಸಿ :ಡಿಫಾರೆಸ್ಟ್ ಸಮಸ್ಯೆ ಬಗೆಹರಿಯದ ಕಾರಣ ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾನದಿಂದ ದೂರ ಉಳಿಯಲು ನಿರ್ಧರಿಸಿದ ತಾಲೂಕಿನ ನಾರಾಯಣಗುರು ನಗರ ನಿವಾಸಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಮನವೊಲಿಸಲು ಪ್ರಯತ್ನಿಸಿದರು.
ಮತದಾನ ಬಹಿಷ್ಕರಿಸಿದ ಗ್ರಾಮಕ್ಕೆ ಸಚಿವ ಹೆಬ್ಬಾರ್ ಭೇಟಿ ಇಂದು ಗ್ರಾಮಕ್ಕೆ ಭೇಟಿ ನೀಡಿದ ಸಚಿವ ಹೆಬ್ಬಾರ್, ಪ್ರಜಾಪ್ರಭುತ್ವಕ್ಕೆ ಮೌಲ್ಯ ನೀಡಬೇಕು. ಯಾವುದೇ ಕಾರಣಕ್ಕೂ ಮತದಾನ ಬಹಿಷ್ಕರಿಸದಂತೆ ಮನವಿ ಮಾಡಿದರು.
ಇದೇ ವೇಳೆ ಮಾತನಾಡಿದ ನಾರಾಯಣಗುರು ನಗರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಗೌರೀಶ ನಾಯ್ಕ, ಮೈಸೂರು ಸರ್ಕಾರ ಇದ್ದ ಕಾಲದಲ್ಲೇ ನಾರಾಯಣ ಗುರು ನಗರ ನಿವಾಸಿಗಳಿಗೆ ಭೂಮಿ ಹಕ್ಕು ಮಂಜೂರು ಮಾಡಲಾಗಿತ್ತು. ಆದರೆ, ಡಿಫಾರೆಸ್ಟ್ ಮಾಡದ ಕಾರಣ ಭೂಮಿ ಹಕ್ಕಿನಿಂದ ಜನರು ವಂಚಿತರಾಗಿದ್ದಾರೆ. ಈ ಸಮಸ್ಯೆ ಬಗೆಹರಿಸಲು ಮಾಡಿದ ಮನವಿಗೆ ಈವರೆಗೂ ಜನಪ್ರತಿನಿಧಿಗಳಿಂದ ಸ್ಪಂದನೆ ಸಿಕ್ಕಿಲ್ಲ. ಇಲ್ಲಿರುವ 497 ಮನೆಗಳ ಮತದಾರರು ಈ ಚುನಾವಣೆಗಳಲ್ಲಿ ಮತದಾನ ಮಾಡದಿರಲು ನಿರ್ಣಯಿಸಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: ವೀರಶೈವ ಲಿಂಗಾಯತ ನಿಗಮ ಪ್ರಶ್ನಿಸಿ ಪಿಐಎಲ್ : ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಹೆಬ್ಬಾರ್, ಪ್ರಸ್ತುತ ಗ್ರಾಮ ಪಂಚಾಯಿತಿ ಚುನಾವಣೆ ನೀತಿ ಸಂಹಿತೆ ಜಾರಿ ಇರುವುದರಿಂದ ನಿವಾರಣೋಪಾಯ ಕಷ್ಟಸಾಧ್ಯ. ಹಾಗಾಗಿ ಚುನಾವಣೆ ಮುಗಿದ ಮೇಲೆ ಕ್ರಮಕೈಗೊಳ್ಳುತ್ತೇವೆ. ಮತದಾನ ಬಹಿಷ್ಕರಿಸಬೇಡಿ ಎಂದು ಮನವಿ ಮಾಡಿದರು. ಆದರೆ ಸಮಸ್ಯೆ ಬಗೆಹರಿಯದೇ ಮತದಾನ ಮಾಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.