ಶಿರಸಿ: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ಅಂತೂ ಬಿಜೆಪಿ ಸರ್ಕಾರದಲ್ಲಿ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಸಚಿವರಾದ ಹೆಬ್ಬಾರ್ ಎದುರಿಗಿದೆ ಹಲವು ಸವಾಲುಗಳು... ತೀವ್ರ ಜಿದ್ದಾಜಿದ್ದಿನಿಂದ ಹೋರಾಡಿ ಮಂತ್ರಿ ಪದವಿ ಪಡೆದಿರುವ ಹೆಬ್ಬಾರ್, ಜಿಲ್ಲೆಯ ಸಮಗ್ರ ಅಭಿವೃದ್ಧಿಯತ್ತ ಗಮನ ಹರಿಸಬೇಕಿದೆ. ಆದರೆ ಹಲವು ಸವಾಲುಗಳು ಅವರ ಮುಂದಿದೆ. 1983 ಅಗಸ್ಟ್ 12 ರಂದು ಯಲ್ಲಾಪುರ ಎ.ಪಿ.ಎಂ.ಸಿ ಮೂಲಕ ರಾಜಕೀಯ ಪ್ರವೇಶ ಮಾಡಿದ್ದ ಹೆಬ್ಬಾರ್, 10 ವರ್ಷಗಳ ಕಾಲ ಎ.ಪಿ.ಎಂ.ಸಿ ಅಧ್ಯಕ್ಷರಾಗಿದ್ದರು. ಅಲ್ಲದೆ ಕೆ.ಡಿ.ಸಿ.ಸಿ ಬ್ಯಾಂಕ್ ಮತ್ತು ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ವಾಯುವ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿ 6 ತಿಂಗಳು ಸೇವೆ ಸಲ್ಲಿಸಿದ್ದ ಶಿವರಾಮ್ ಹೆಬ್ಬಾರ್. 2008 ರಲ್ಲಿ ಮೊದಲ ವಿಧಾನಸಭಾ ಚುನಾವಣೆಯನ್ನು ಎದುರಿಸಿ ಒಟ್ಟು 3 ಬಾರಿ ಶಾಸರಾಗಿ ಆಯ್ಕೆಯಾಗಿ, ಮಂತ್ರಿ ಸ್ಥಾನ ಅಲಂಕರಿಸಿದ್ದರು. ಈಗ ಹಲವು ಸವಾಲುಗಳ ನಡುವೆ ಮತ್ತೆ ಮಂತ್ರಿ ಸ್ಥಾನ ನಿಭಾಯಿಸಬೇಕಿದೆ.
ಹೆಬ್ಬಾರ್ ಸ್ವ ಕ್ಷೇತ್ರ ಯಲ್ಲಾಪುರ ಸೇರಿದಂತೆ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಸಾಕಷ್ಟು ಹಾನಿಯಾಗಿದೆ. ಮನೆ ಹಾಗೂ ಆಸ್ತಿಗಳನ್ನು ಕಳೆದುಕೊಂಡವರಿಗೆ ಪರಿಹಾರ ಒದಗಿಸಿಕೊಡಬೇಕಿದೆ. ಸಾಕಷ್ಟು ವಿರೋಧ ವ್ಯಕ್ತವಾಗುತ್ತಿರುವ ಸಾಗರ ಮಾಲಾ ಯೋಜನೆಗೆ ಜನರ ಮನವೊಲಿಸಿ ಯೋಜನೆಯ ಅನುಷ್ಠಾನದ ಜವಾಬ್ದಾರಿ ಹೆಬ್ಬಾರ್ ಹೆಗಲ ಮೇಲಿದೆ. ಇದರ ಜೊತೆಗೆ ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ವಾಪಾಸ್ ಪಡೆಯಬೇಕಿದೆ. ಜೊತೆಗೆ ಜಿಲ್ಲೆಗೆ ಸಂಚಾರಿ ಪೊಲೀಸ್ ಠಾಣೆ, ಡಾಗ್ ಸ್ಕ್ವಾಡ್ ಅಗತ್ಯವಿದ್ದು, ಅತೀ ಬೇಡಿಕೆಯ ತುರ್ತು ಚಿಕಿತ್ಸಾ ಆಸ್ಪತ್ರೆ ನಿರ್ಮಾಣವಾಗಬೇಕಿದೆ. ಒಟ್ಟಾರೆಯಾಗಿ ಹೆಬ್ಬಾರ್ ಎದುರು ಬೆಟ್ಟದಷ್ಟು ಸಮಸ್ಯೆಗಳಿದ್ದು, ಮೊದಲ ಬಾರಿಗೆ ಸಚಿವರಾಗಿ, ಜಿಲ್ಲಾ ಉಸ್ತುವಾರಿಗಳೂ ಆಗಲಿರುವ ಅವರು, ಇಷ್ಟೆಲ್ಲಾ ಸವಾಲುಗಳನ್ನು ನಿಭಾಯಿಸುವಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.