ಶಿರಸಿ: ಹಿಜಾಬ್ ನಿಷೇಧ ತೆರವು ವಿಷಯ ಸರ್ಕಾರದ ಮುಂದಿದೆ. ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಪ್ರವಾಸೋದ್ಯಮ ಹಾಗೂ ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿಷಯ ಸುಪ್ರೀಂ ಕೋರ್ಟಿನಲ್ಲಿದ್ದು, ಹೆಚ್ಚು ಚರ್ಚೆ ಮಾಡುವುದಿಲ್ಲ. ಮುಖ್ಯಮಂತ್ರಿಗಳೂ ಸಹ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ ಎಂದರು.
ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ನಮಗೆ ಭಾರ ಬಿದ್ದಿದೆ. ಮುಖ್ಯಮಂತ್ರಿ ಚಾಣಾಕ್ಷ ನೀತಿಯಿಂದ ಇದನ್ನು ನೀಗಿಸುತಿದ್ದಾರೆ. ಹಲವು ಮೂಲಗಳಿಂದ ಹೆಚ್ಚು ಹಣ ಕ್ರೋಢೀಕರಣ ಮಾಡುವ ಮೂಲಕ ಸರಿದೂಗಿಸುತ್ತೇವೆ. ಈ ಬಜೆಟ್ನಲ್ಲಿ ತೆರಿಗೆ ಹೆಚ್ಚಳ ಮಾಡಬಹುದು ಎಂದು ಗ್ಯಾರಂಟಿ ಯೋಜನೆಯ ಬಗ್ಗೆ ಪ್ರತಿಕ್ರಿಯಿಸಿದರು.
ಬಿ.ಕೆ.ಹರಿಪ್ರಸಾದ್ ಅವರನ್ನು ಸಮಾಧಾನಪಡಿಸುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಿ.ಕೆ.ಹರಿಪ್ರಸಾದ್ ವರ್ಕಿಂಗ್ ಕಮಿಟಿ ಸದಸ್ಯರು. ಅವರನ್ನು ನಾವು ಸಮಾಧಾನ ಪಡಿಸುವುದಲ್ಲ, ಅವರು ನಮ್ಮನ್ನು ಸಮಾಧಾನಪಡಿಸಬೇಕು ಎಂದು ಪ್ರತಿಕ್ರಿಯಿಸಿದರು.
ಸಂಸದರ ಅಮಾನತ್ತು ವಿಚಾರವಾಗಿ ಪ್ರತಿಕ್ರಿಯಿಸಿ, 142 ಸಂಸದರ ಅಮಾನತು ಮಾಡಿರುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಬಹುದೊಡ್ಡ ಕೊಡಲಿ ಪೆಟ್ಟು. ಅಂತರರಾಷ್ಟ್ರೀಯ ಮಟ್ಟದ ವ್ಯವಸ್ಥೆಯಲ್ಲಿ ಭಾರತವನ್ನು ಅವಮಾನಗೊಳಿಸಿರುವ ಬಿಜೆಪಿ ನೀತಿ ಖಂಡನೀಯ ಮಾತ್ರವಲ್ಲ, ಪ್ರಜಾಪ್ರಭುತ್ವಕ್ಕೆ ಬಂದಿರುವ ದೊಡ್ಡ ಭಯ ಎಂದರು.
ಕೇಂದ್ರದ ಹಿರಿಯ ನಾಯಕರು ಕರ್ನಾಟಕದಲ್ಲಿ ಸ್ಪರ್ಧೆ ಮಾಡುವ ವಿಚಾರದ ಬಗ್ಗೆ ಮಾತನಾಡಿ, ಪಕ್ಷದ ಆಂತರಿಕ ವಲಯದಲ್ಲೂ ಚರ್ಚೆ ಮಾಡಿಲ್ಲ. ಆದರೆ ಬಹಳಷ್ಟು ಕಡೆ ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ಸೇರಿದಂತೆ ಇನ್ನಿತರು ಬರಲಿ ಎಂಬ ಒತ್ತಾಯ ಇದೆ. ಇನ್ನೂ ಯಾವುದೇ ಚರ್ಚೆ ಆ ದಿಸೆಯಲ್ಲಿ ಆಗಿಲ್ಲ. ಲೋಕಸಭೆಗೆ ಸ್ಪರ್ಧಿಸುವ ಬಗ್ಗೆ ನಾನೂ ಸಹ ಯಾವುದೇ ರೀತಿಯ ಚರ್ಚೆ ಮಾಡಿಲ್ಲ. ನಾನು ಸ್ಪರ್ಧೆ ಮಾಡುವ ಬಗ್ಗೆ ಪ್ರಸ್ತಾವನೆಗಳೂ ಇಲ್ಲ ಎಂದು ಹೇಳಿದರು.
ಕಾಂಗ್ರೆಸ್ ಸಂವಿಧಾನಬದ್ಧವಾಗಿ ನಡೆದುಕೊಳ್ಳುವ ಪಕ್ಷ. ಯಾರು ಏನೇ ಹಾಗೇ ಮಾಡಿ ಹೀಗೇ ಮಾಡಿ ಅಂದರೂ ನಾವು ಸಂವಿಧಾನದಲ್ಲಿ ಏನು ಹೇಳುತ್ತೇವೆಯೋ ಅದನ್ನು ಮಾಡುತ್ತೇವೆ ಎಂದು ಸಂಸದ ಅನಂತಕುಮಾರ ಹೆಗಡೆ ಅವರ ಮಾತಿಗೆ ಸಚಿವ ಪಾಟೀಲ್ ಪ್ರತಿಕ್ರಿಯಿಸಿದರು.
ಇದನ್ನೂ ಓದಿ:ಉ.ಕರ್ನಾಟಕದ ಧ್ವನಿಯಾಗಿ ಪಕ್ಷ ನನಗೆ ವಿಪಕ್ಷ ಉಪನಾಯಕನ ಸ್ಥಾನ ನೀಡಿದೆ: ಬೆಲ್ಲದ್