ಕಾರವಾರ:ಕಾರವಾರದಲ್ಲಿ ಇಂದು ನಡೆದ ಮಾರ್ಕೆ ಪೂನಾವ್ ಜಾತ್ರೆ ಎಲ್ಲರ ಗಮನ ಸೆಳೆದಿದ್ದು, ಜಾತ್ರೆಯಲ್ಲಿ ಗಂಡು ಮಕ್ಕಳು ಹೊಟ್ಟೆಗೆ ಸೂಜಿ ಚುಚ್ಚಿಕೊಂಡು ನೂಲನ್ನು ಪೋಣಿಸುವ ಮೂಲಕ ಸಂಪ್ರದಾಯ ಆಚರಿಸಿದರೆ, ಇನ್ನೊಂದೆಡೆ ಹೆಣ್ಣು ಮಕ್ಕಳು ದೀಪವನ್ನ ಹೊತ್ತು ಹರಕೆ ಈಡೇರಿಸುವ ಮೂಲಕ ಜಾತ್ರೆಯನ್ನು ವಿಭಿನ್ನವಾಗಿ ಆಚರಿಸಲಾಗಿದೆ.
ಕಾರವಾರ ತಾಲೂಕಿನ ಮಾಜಾಳಿಯಲ್ಲಿ ಪ್ರತಿ ವರ್ಷದಂತೆ ನಡೆದ ಮಾರ್ಕೆ ಪೂನಾವ್ ಅನ್ನೋ ಜಾತ್ರೆಯಲ್ಲಿ ಯುವಕರು ಸೂಜಿ ಚುಚ್ಚಿಸಿಕೊಳ್ಳುವ ಮೂಲಕ ದೇವರಿಗೆ ಹರಕೆ ತೀರಿಸುತ್ತಾರೆ. ಪ್ರೌಢಾವಸ್ಥೆಯ ಪೂರ್ವದಲ್ಲಿ ಗಂಡು ಮಕ್ಕಳು ಹೊಕ್ಕಳ ಬಳಿ ದಾರ ಪೋಣಿಸಿಕೊಳ್ಳುವುದರಿಂದ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇಲ್ಲಿನ ಜನರಲ್ಲಿದೆ. ಈ ಕಾರಣದಿಂದ ಮದುವೆಗೂ ಮೊದಲು ಯುವಕರು ಮತ್ತು ಮಕ್ಕಳು ಗ್ರಾಮದ ಧಾಡ್ ದೇವರ ದೇವಸ್ಥಾನದಲ್ಲಿ ಸೂಜಿ ಚುಚ್ಚಿಸಿಕೊಳ್ಳುವುದು ಇಲ್ಲಿನ ವಾಡಿಕೆಯಾಗಿದೆ.
ಬಳಿಕ ಒಂದು ಕಿಲೋ ಮೀಟರ್ ದೂರವಿರುವ ದೇವತಿ ದೇವಿಯ ದೇವಸ್ಥಾನದ ಬಳಿ ಹರಕೆ ಹೊತ್ತವರು ಬಂಡಿಯೊಂದಿಗೆ ಹರಕೆ ತೀರಿಸುತ್ತಾರೆ. ಈ ಭಾರಿ 30ಕ್ಕೂ ಹೆಚ್ಚು ಪುರುಷರು ಹಾಗೂ ಮಕ್ಕಳು ಅರ್ಚಕರಿಂದ ಸೂಜಿ ಚುಚ್ಚಿಸಿಕೊಂಡಿದ್ದಾರೆ. ಇದೊಂದು ಅನಾದಿಕಾಲದಿಂದ ನಡೆದುಕೊಂಡು ಬಂದ ಸಂಪ್ರದಾಯ ಎನ್ನುತ್ತಾರೆ ದೇವಸ್ಥಾನದ ಸಮಿತಿ ಸದಸ್ಯ ಅಶೋಕ ಗುರವ್.