ರಾಜ್ಯ ರಾಜಕೀಯಕ್ಕೆ ಮಾರ್ಗರೆಟ್ ಆಳ್ವಾ ರೀ ಎಂಟ್ರಿ: ಮಗನಿಗೆ ರಾಜಕೀಯ ನೆಲೆ ಕಲ್ಪಿಸಲು ಅಮ್ಮನ ಕಸರತ್ತು.. ಕಾರವಾರ: ಕಾಂಗ್ರೆಸ್ ಹಿರಿಯ ನಾಯಕಿ, ಮಾಜಿ ರಾಜ್ಯಪಾಲರಾದ ಮಾರ್ಗರೆಟ್ ಆಳ್ವಾ ಅವರು ಮತ್ತೆ ರಾಜ್ಯ ರಾಜಕಾರಣದತ್ತ ಚಿತ್ತ ಹರಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಪ್ರಬಲ ನಾಯಕಿ ಎಂದು ಗುರುತಿಸಿಕೊಂಡಿರುವ ಅವರು ಉತ್ತರ ಕನ್ನಡ ಜಿಲ್ಲಾ ರಾಜಕೀಯಕ್ಕೆ ಪ್ರವೇಶಿಸಲು ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಪಕ್ಷದ ನೆಲೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ.
ಮಾರ್ಗರೆಟ್ ಆಳ್ವಾ, ಕಾಂಗ್ರೆಸ್ ಪಕ್ಷದಲ್ಲಿ ತನ್ನದೇ ಆದ ಹಿಡಿತವನ್ನು ಹೊಂದಿರು ರಾಜಕಾರಣಿ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿ, ಕೇಂದ್ರ ಸಚಿವೆ, ರಾಜ್ಯಪಾಲೆ ಸೇರಿದಂತೆ ಹಲವು ಹುದ್ದೆಗಳನ್ನು ಏರಿದ ರಾಜಕಾರಣಿಯಾಗಿದ್ದವರು. ಆದರೆ ಕಳೆದ ಹತ್ತು ವರ್ಷಕ್ಕೂ ಅಧಿಕ ಕಾಲದಿಂದ ಸಕ್ರಿಯ ರಾಜಕೀಯದಿಂದ ಆಳ್ವಾ ದೂರವಾಗಿದ್ದರು. ಇತ್ತೀಚೆಗೆ ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಅಭ್ಯರ್ಥಿ ಆಗುವ ಮೂಲಕ ಸಂಚಲನ ಮೂಡಿಸಿದ್ದರು.
ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದಿಂದ ಒಮ್ಮೆ ಸಂಸದೆಯಾಗಿ ಆಯ್ಕೆಯಾಗಿ, ಎರಡು ಬಾರಿ ಸಂಸದ ಅನಂತಕುಮಾರ್ ಹೆಗಡೆ ವಿರುದ್ದ ಸೋಲನ್ನು ಕಂಡಿದ್ದರು. 2008ರ ಲೋಕಸಭಾ ಚುನಾವಣೆಯಲ್ಲಿ ಆಳ್ವಾ ಸೋಲಿನ ನಂತರ ಜಿಲ್ಲೆಯ ರಾಜಕೀಯದಿಂದ ದೂರ ಸರಿದಿದ್ದು, ಯಾವ ಚಟುವಟಿಕೆಯಲ್ಲೂ ಕಾಣಿಸಿಕೊಂಡಿರಲಿಲ್ಲ.
ಆದರೆ ಗಾಂಧಿ ಕುಟುಂಬದ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಅವರು, ಇದೀಗ ಮತ್ತೆ ಜಿಲ್ಲೆಯ ರಾಜಕೀಯದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಪಕ್ಷದ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುತ್ತಿರುವ ಅವರು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಡಬಲ್ ಎಂಜಿನ್ ಸರ್ಕಾರ ಇರುವುದಾಗಿ ಬಿಜೆಪಿಯವರು ಹೇಳಿಕೊಳ್ಳುತ್ತಾರೆ. ಆದರೆ ಎರಡು ಕಡೆಯೂ ಎಂಜಿನ್ ಚಾಲೂ ಆಗುತ್ತಿಲ್ಲ. ರಾಜ್ಯದಲ್ಲಿ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. 15 ಲಕ್ಷ ಜನರ ಖಾತೆಗೆ ಹಾಕುವುದಾಗಿ ಹೇಳಿದ್ದರು. ಆದರೆ 15 ರೂ ಸಹ ಬಂದಿಲ್ಲ. ಬಜೆಟ್ ನಲ್ಲಿ ಎಲ್ಲ ಕಡಿತಗೊಳಿಸಿ ಹಣವನ್ನು ಅದಾನಿ ಜೆಬು ಸೇರುವಂತೆ ಮಾಡಲಾಗಿದೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.
ಮಗನಿಗಾಗಿ ತಾಯಿ ರೀ ಎಂಟ್ರಿ?: ಇನ್ನು ಈ ಬಾರಿ ಮಾರ್ಗರೆಟ್ ಆಳ್ವಾ ಪುತ್ರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ನಿವೇದಿತ್ ಆಳ್ವಾ ರಾಜಕೀಯಕ್ಕಾಗಿ ತಾಯಿ ಮಾರ್ಗರೆಟ್ ಆಳ್ವಾ ಮತ್ತೆ ಜಿಲ್ಲೆಯ ರಾಜಕೀಯಕ್ಕೆ ಎಂಟ್ರಿಯಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಜಿಲ್ಲೆಯ ಕುಮಟಾ ಕ್ಷೇತ್ರದಿಂದ ನಿವೇದಿತ್ ಆಳ್ವಾರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸುವ ಕಸರತ್ತನ್ನು ಸಹ ಪ್ರಾರಂಭಿಸಿದ್ದು, ಇದೇ ಕಾರಣಕ್ಕೆ ಕುಮಟಾ ಕ್ಷೇತ್ರದ ಪಕ್ಷದ ಕಾರ್ಯಕ್ರಮದಲ್ಲಿ ಮಾರ್ಗರೆಟ್ ಆಳ್ವಾ ಪಾಲ್ಗೊಂಡಿದ್ದಾರೆ.
ಇನ್ನು, ಕುಮಟಾದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ತಾನು ಖಾಸಗಿಯಾಗಿ ಮಾಡುತ್ತೇನೆ ಎನ್ನುವ ಆಶ್ವಾಸನೆಯನ್ನು ಸಹ ಆಳ್ವಾ ನೀಡಿದ್ದು ಮಗನ ರಾಜಕೀಯ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ಹೇಳಿಕೆ ಕೊಟ್ಟಿದ್ದಾರೆ ಎನ್ನುವ ಚರ್ಚೆ ಸಹ ಪ್ರಾರಂಭವಾಗಿದೆ. ಇದೇ ವೇಳೆ ಮಾಜಿ ಸಚಿವ, ಹಾಲಿ ಶಾಸಕ, ಹಿರಿಯ ನಾಯಕ ಆರ್ ವಿ ದೇಶಪಾಂಡೆ ಕೂಡ ಆಳ್ವಾರೊಂದಿಗೆ ವೇದಿಕೆ ಹಂಚಿಕೊಂಡಿದ್ದು ಇಬ್ಬರೂ ಸೇರಿ ಜಿಲ್ಲೆಯಲ್ಲಿ ಪಕ್ಷವನ್ನು ಬಲಗೊಳಿಸಲು ಒಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದನ್ನೂ ಓದಿ:ಟಿಪ್ಪು ಜಯಂತಿ ಮಾಡಬೇಕು ಅಂದವರಿಗೆ, ಒಡೆಯರ್ ಜಯಂತಿ ಆಚರಿಸಬೇಕಂತ ಅನಿಸಲಿಲ್ಲ: ಸಚಿವೆ ಕರಂದ್ಲಾಜೆ