ಕಾರವಾರ (ಉತ್ತರ ಕನ್ನಡ):ಲಾಕ್‍ಡೌನ್ ವೇಳೆ ಅದೆಷ್ಟೊ ಮಂದಿ ಕೆಲಸವಿಲ್ಲದೆ ಖಾಲಿ ಕುಳಿತಿದ್ದಾರೆ. ಆದರೆ ಇಲ್ಲೋರ್ವ ಇಳಿ ವಯಸ್ಸಿನ ವೃದ್ಧ ಎರಡು ಲಾಕ್‍ಡೌನ್ ಅವಧಿಯನ್ನು ಬಳಸಿಕೊಂಡು ಏಕಾಂಗಿಯಾಗಿ ಬಾವಿ ತೋಡಿ ಗಂಗೆಯನ್ನು ಹರಿಸುವ ಮೂಲಕ ಹತ್ತಾರು ವರ್ಷಗಳಿಂದ ಎದುರಾಗುತ್ತಿದ್ದ ನೀರಿನ ಸಮಸ್ಯೆಗೆ ಮುಕ್ತಿ ಕಂಡುಕೊಂಡಿದ್ದಾರೆ.
ಪ್ರತಿ ವರ್ಷ ಬಿರು ಬೇಸಿಗೆ ವೇಳೆ ಎದುರಾಗುತ್ತಿದ್ದ ನೀರಿನ ಸಮಸ್ಯೆಗೆ ಅಂಕೋಲಾ ತಾಲೂಕಿನ ಮಂಜಗುಣಿ ಗ್ರಾಮದ ವೃದ್ಧ ಮಹಾದೇವ ಮಂಕಾಳು ನಾಯ್ಕ ಕೊನೆಗೂ ಪರಿಹಾರ ಕಂಡುಕೊಂಡಿದ್ದಾರೆ.
ಏಕಾಂಗಿಯಾಗಿ ಬಾವಿ ತೋಡಿದ ಮಹಾದೇವ ಮೊದಲ ಲಾಕ್ಡೌನ್ನಲ್ಲಿ ಬಾವಿ ತೋಡಲು ಪ್ರಾರಂಭ:
ಕೊರೊನಾದಿಂದಾಗಿ ಎಲ್ಲೆಡೆ ಲಾಕ್‍ಡೌನ್ ಘೋಷಣೆಯಾದ ಬಳಿಕ ಕೆಲಸವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲಿಯೂ ಕೂಲಿಯನ್ನೇ ನಂಬಿಕೊಂಡಿದ್ದವರ ಬದುಕು ಇನ್ನಷ್ಟು ಕಷ್ಟಕ್ಕೆ ಸಿಲುಕಿದೆ. ಆದರೆ ಈ ಎಲ್ಲ ಸಂಕಷ್ಟದ ನಡುವೆ ಮಂಜಗುಣಿಯ ಮಹಾದೇವ ಖಾಲಿ ಕೂರುವ ಬದಲು ಊರಿನಲ್ಲಿ ಎದುರಾಗುತ್ತಿದ್ದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಆಲೋಚನೆ ಮಾಡಿದರಂತೆ.
ಏಕಾಂಗಿಯಾಗಿ ಬಾವಿ ತೋಡಿದ ಮಹಾದೇವ ಅದಕ್ಕಾಗಿ ಕಳೆದ ಬಾರಿಯ ಲಾಕ್‍ಡೌನ್ ಅವಧಿಯಲ್ಲಿ ತಮ್ಮ ಮನೆಯ ಹಿತ್ತಲನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ಬಾವಿ ತೋಡುವುದು ಸುಲಭದ ಕೆಲಸವಾಗಿರಲಿಲ್ಲ. ಹಿತ್ತಲ ಜಾಗ ಕಲ್ಲಿನ ಅರೆಯಿಂದ ಆವೃತವಾಗಿತ್ತು. ಆದರೂ ಛಲ ಬಿಡದ ಇವರು ಗುದ್ದಲಿ, ಪಿಕಾಸಿ ಹಿಡಿದು ಕಲ್ಲಿನ ಅರೆಯನ್ನು ಅಗೆದಿದ್ದರು. ಸರಿ ಸುಮಾರು ಎಂಟು ತಿಂಗಳ ಪ್ರಯತ್ನದಿಂದ 32 ಅಡಿಗಳ ಆಳದ ಬಾವಿ ನಿರ್ಮಾಣವಾಗಿತ್ತು. ಇಷ್ಟಾದರೂ ನಿರೀಕ್ಷಿತ ಪ್ರಮಾಣದಲ್ಲಿ ನೀರು ಬಾರದ ಕಾರಣ ನಿರಾಸೆಗೊಂಡಿದ್ದರು. ಅಲ್ಲದೆ ಅಷ್ಟರಲ್ಲಾಗಲೇ ಲಾಕ್‍ಡೌನ್ ಸಹ ಸಡಿಲಿಕೆ ಆದ್ದರಿಂದ ಹೊಟ್ಟೆ ಪಾಡಿಗಾಗಿ ಕೂಲಿಗೆ ಹೊರಟಿದ್ದರಂತೆ.
ಏಕಾಂಗಿಯಾಗಿ ಬಾವಿ ತೋಡಿದ ಮಹಾದೇವ ಎರಡನೇ ಲಾಕ್ಡೌನ್ನಲ್ಲಿ ದೊರಕಿದ ನೀರು:
ಆದರೆ ಇದೀಗ ಕೊರೊನಾ ಎರಡನೇ ಅಲೆ ವೇಳೆ ಮತ್ತೆ ಲಾಕ್‍ಡೌನ್ ಆಗಿದ್ದು, ಈ ಅವಧಿಯಲ್ಲಿ ಖಾಲಿ ಕೂರುವ ಬದಲು ಅದೇ ಬಾವಿಯನ್ನು ಮತ್ತೆ ತೋಡಲು ಪ್ರಾರಂಭಿಸಿದ್ದರು. ಈ ಬಾರಿ ಅವರ ಶ್ರಮಕ್ಕೆ ಗಂಗೆ ಕೂಡ ಒಲಿದಿದ್ದು, ಕಡು ಕಲ್ಲನ್ನು ಕಷ್ಟಪಟ್ಟು ಕೊರೆದ ಅವರಿಗೆ ನಾಲ್ಕು ಅಡಿ ಆಳ ಅಗೆಯುತ್ತಿದ್ದಂತೆ ಅಂತರಗಂಗೆ ಚಿಮ್ಮಿ, ಮೊಗದಲ್ಲಿ ಮಂದಹಾಸ ಮೂಡಿದೆ.
ಏಕಾಂಗಿಯಾಗಿ ಬಾವಿ ತೋಡಿದ ಮಹಾದೇವ ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಮಹಾದೇವ, ಇರುವ ಒಂದು ಬಾವಿಯಲ್ಲಿ ಹತ್ತಾರು ಮನೆಗಳ ಜನರು ನೀರು ಕೊಂಡೊಯ್ಯಬೇಕಾದ ಸ್ಥಿತಿ ಕಣ್ಣ ಮುಂದೆ ಇತ್ತು. ಅದರಲ್ಲೂ ಮೇ-ಜೂನ್ ತಿಂಗಳ ವೇಳೆಗೆ ಇದ್ದ ಒಂದು ಬಾವಿಯ ಅಂತರ್ಜಲಮಟ್ಟ ಕುಸಿದು ಕುಡಿಯುವುದಕ್ಕೂ ನೀರು ಸಿಗದೆ ಗ್ರಾಮಪಂಚಾಯ್ತಿಯಿಂದ ವಾರಕ್ಕೆ ಒಂದು ಬಾರಿ ಬರುವ ನೀರೇ ಗತಿಯಾಗಿತ್ತು. ಗ್ರಾಮದಲ್ಲಿ ಕೆಲವರ ಮನೆಯಲ್ಲಿ ಬಾವಿ ಇದ್ದರೂ ಹೆಚ್ಚು ನೀರು ಇರದ ಕಾರಣ ಹಾಗೂ ಪಕ್ಕದಲ್ಲೇ ಸಮುದ್ರ ಇರುವುದರಿಂದ ಬೇಸಿಗೆಯಲ್ಲಿ ಉಪ್ಪು ನೀರಾಗುತಿತ್ತು.
ಏಕಾಂಗಿಯಾಗಿ ಬಾವಿ ತೋಡಿದ ಮಹಾದೇವ ಹೀಗಾಗಿ ಊರ ಮಂದಿಗೆ ಖಾಲಿ ಕೊಡ ಹಿಡಿದು ಟ್ಯಾಂಕರ್ ಬರುವ ದಾರಿಯನ್ನೇ ಕಾಯುವುದೇ ದೊಡ್ಡ ಕೆಲಸವಾಗುತಿತ್ತು. ಆದರೆ ಪ್ರತಿ ದಿನ ಕೂಲಿ ಕೆಲಸಕ್ಕೆ ಹೋಗುವ ನಮಗೆ ಲಕ್ಷಾಂತರ ರೂಪಾಯಿ ಸುರಿದು ಬಾವಿ ತೋಡಿಸಲು ಸಾಧ್ಯವಿರಲಿಲ್ಲ. ಈ ಕಾರಣದಿಂದ ಲಾಕ್‍ಡೌನ್ ವೇಳೆ ಕೂಲಿ ಕೆಲಸವಿಲ್ಲದೇ ಮನೆಯಲ್ಲಿ ಖಾಲಿ ಕೂರುವ ಬದಲು ಬಾವಿ ತೋಡಲು ನಿರ್ಧರಿಸಿದ್ದೆ. ಮೊದಲ ಪ್ರಯತ್ನ ವಿಫಲವಾದರೂ ಎರಡನೇ ಲಕ್ಡೌನ್ ವೇಳೆ ಮತ್ತೆ ತೋಡಿದಾಗ ನೀರು ಬಂದಿದ್ದು ತುಂಬಾ ಖುಷಿಯಾಗುತ್ತಿದೆ ಎನ್ನುತ್ತಾರೆ ಶ್ರಮಜೀವಿ ಮಂಜಗುಣಿಯ ಮಹಾದೇವ.
ಊರಿನ ಜನರು ಕೂಡ ಇವರ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದು, ತನ್ನ ಸ್ವಂತಕ್ಕಲ್ಲದೇ ಊರಿನವರಿಗೂ ನೀರು ಕೊಡುತ್ತಿರುವ ಈ ಆಧುನಿಕ ಭಗೀರಥನಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.