ಭಟ್ಕಳ: ಕಳೆದ ಎರಡು ದಿನಗಳಿಂದ ತಾಲೂಕಿನಾದ್ಯಂತ ಭುಗಿಲೆದ್ದದಿರುವ ಆಸರಕೇರಿ ನಿಶ್ಚಿಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಮಹಾದ್ವಾರ ನಿರ್ಮಾಣ ಹಾಗೂ ಟಿಪ್ಪು ಗೇಟ್ ನಿರ್ಮಾಣ ವಿವಾದ ಕಾಮಗಾರಿ ಇದೀಗ ಸ್ಥಗಿತಗೊಂಡಿದೆ. ಸದ್ಯ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಕಳೆದ ಕೆಲವು ದಿನಗಳ ಹಿಂದಷ್ಟೇ ಶಾಸಕ ಸುನೀಲ್ ನಾಯ್ಕ ತಮ್ಮ ವೈಯಕ್ತಿಕ ವೆಚ್ಚದಲ್ಲಿ ದೇವಸ್ಥಾನ ಮಹಾದ್ವಾರ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಅದರಂತೆ ಮಹಾದ್ವಾರ ನಿರ್ಮಾಣ ಕಾಮಗಾರಿ ಕೂಡಾ ನಡೆದಿತ್ತು. ಆದರೆ, ಸದ್ಯ ಮಹಾದ್ವಾರ ನಿರ್ಮಾಣಕ್ಕೆ ಇನ್ನೊಂದು ಕೋಮಿನವರ ಜನರು ತಕರಾರು ತೆಗೆದಿದ್ದರಿಂದ ಅಷ್ಟಕ್ಕೆ ನಿಲ್ಲಿಸಲಾಗಿದೆ.
ಮಹಾದ್ವಾರ ವಿರುದ್ಧವಾಗಿ ಹಳೆ ಬಸ್ ನಿಲ್ದಾಣದ ಸುಲ್ತಾನ್ ಸ್ಟ್ರೀಟ್ ಮಾರ್ಗ ಮಧ್ಯೆ ಟಿಪ್ಪು ಸುಲ್ತಾನ್ ಗೇಟ್ ನಿರ್ಮಿಸಲು ಇನ್ನೊಂದು ಕೋಮಿನ ಜನರು ಮುಂದಾಗಿದ್ದರು. ಜೊತೆಗೆ ಕಾಮಗಾರಿಗೆ ಚಾಲನೆ ನೀಡುವ ಪ್ಲೆಕ್ಸ್ ಹಾಕಿ ಸ್ಥಳದ ಗುರುತು ಸಹ ಮಾಡಿದ್ದರು.
ಭಟ್ಕಳದಲ್ಲಿ ವಿವಾದ ಸದ್ಯಕ್ಕೆ ಅಂತ್ಯ ಆದರೆ, ಇಂದು ಬೆಳಗ್ಗೆ ಟಿಪ್ಪು ಸುಲ್ತಾನ್ ಗೇಟ್ ನಿರ್ಮಾಣ ಕಾಮಗಾರಿ ಚಾಲನೆ ಮಾಡಿದ್ದರಿಂದ ಸ್ಥಳಕ್ಕೆ ತಹಶೀಲ್ದಾರ್, ಪುರಸಭೆ ಮುಖ್ಯಾಧಿಕಾರಿ ಹಾಗೂ ಸಿಪಿಐ ಸ್ಥಳಕ್ಕೆ ಭೇಟಿ ನೀಡಿ ಆ ಕೆಲಸವನ್ನು ಸ್ಥಗಿತಗೊಳಿಸಿದರು. ಹಾಗಾಗಿ ಮಹಾದ್ವಾರ ನಿರ್ಮಾಣ ಸ್ಥಳ ಮತ್ತು ಟಿಪ್ಪು ಗೇಟ್ ನಿರ್ಮಾಣ ಮಾಡುವ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಹೆಣ ಬೇಕಾದ್ರೂ ಬೀಳಲಿ:ಇಂದು ಸ್ಥಳಕ್ಕೆ ಬಂದ ಪುರಸಭೆ ಮುಖ್ಯಾಧಿಕಾರಿಗಳು ಮಹಾದ್ವಾರ ನಿರ್ಮಾಣದ ಕೆಲಸಕ್ಕೆ ಬಳಸಿದ ಕೆಲವು ಸಾಮಗ್ರಿಗಳನ್ನು ಜಪ್ತಿ ಮಾಡತೊಡಗಿದ್ದರು. ಈ ವೇಳೆ, ಭಟ್ಕಳ ನಾಮಧಾರಿ ಸಮಾಜದ ಅಧ್ಯಕ್ಷ ಕೃಷ್ಣ ನಾಯ್ಕ, ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಘಟನೆ ಸಹ ನಡೆಯಿತು.
ಈ ಭಾಗದಿಂದ ಒಂದು ಮೊಳೆ ಕೂಡ ತೆಗೆದುಕೊಂಡು ಹೋಗಲು ನಾನು ಬಿಡುವುದಿಲ್ಲ. ನನ್ನ ಹೆಣ ಬೇಕಾದರೂ ಬೀಳಲಿ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ಬಳಿಕ ಅಧಿಕಾರಿಗಳು ಸಾಮಗ್ರಿಗಳನ್ನು ಅಲ್ಲೇ ಬಿಟ್ಟು ತೆರಳಿದರು.
ಕಾಮಗಾರಿ ನಡೆಯುತ್ತಿದ್ದ ಸ್ಥಳ ಸೀಜ್:ಮಹಾದ್ವಾರ ಹಾಗೂ ಟಿಪ್ಪು ಸುಲ್ತಾನ್ ಗೇಟ್ ನಿರ್ಮಾಣ ಮಾಡುವ ಸ್ಥಳವನ್ನು ತಹಶೀಲ್ದಾರ್, ಪುರಸಭೆ ಮುಖ್ಯಾಧಿಕಾರಿ ಹಾಗೂ ಸಿಪಿಐ ಮುಂದಾಳತ್ವದಲ್ಲಿ ಕಾಮಗಾರಿ ನಡೆಸದಂತೆ ಸ್ಥಳವನ್ನು ಸೀಜ್ ಮಾಡಿ ಟಿಪ್ಪು ಗೇಟ್ ನಿರ್ಮಾಣಕ್ಕೆ ಹಾಕಲಾದ ಫ್ಲೆಕ್ಸ್ ಅನ್ನು ತೆರವುಗೊಳಿಸಿದರು. ಇದರರಿಂದಾಗಿ ಎರಡು ದಿನಗಳಿಂದ ಗೊಂದಲ ಉಂಟಾಗಿದ್ದ ಮಹಾದ್ವಾರ ಹಾಗೂ ಟಿಪ್ಪು ಸುಲ್ತಾನ್ ಗೇಟ್ ನಿರ್ಮಾಣ ಕಾಮಗಾರಿಗೆ ಸದ್ಯ ಸ್ಥಗಿತಗೊಂಡಿದೆ.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸುಮಂತ ಬಿ., ಪುರಸಭೆ ಮುಖ್ಯಾಧಿಕಾರಿ ಸುರೇಶ, ನಗರ ಹಾಗೂ ಗ್ರಾಮೀಣ ಠಾಣೆಯ ಸಿಪಿಐಗಳಾದ ದಿವಾಕರ್, ಮಾಹಾಬಲೇಶ್ವರ ನಾಯ್ಕ, ನಗರ ಹಾಗೂ ಗ್ರಾಮೀಣ ಠಾಣೆಯ ಪಿಎಸ್ಐಗಳಾದ ಸುಮಾ ಆಚಾರ್ಯ, ಭರತ್ ನಾಯ್ಕ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಇದನ್ನೂ ಓದಿ: ತನ್ನ ಪರ ತೀರ್ಪು ಬರುವ ಮುನ್ನವೇ ಆತ್ಮಹತ್ಯೆಗೆ ಶರಣಾದ ಯುವಕ