ಕಾರವಾರ:ಇಲ್ಲಿನ ರವೀಂದ್ರನಾಥ್ ಟಾಗೋರ್ ಕಡಲತೀರಕ್ಕೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಭೇಟಿ ನೀಡಿ, ಮೀನುಗಾರರಿಗೆ ತೊಂದರೆಯಾಗಲಿರುವ ವಾಣಿಜ್ಯ ಬಂದರು ವಿಸ್ತರಣೆ ಕಾಮಗಾರಿ ಪರಿಶೀಲನೆ ನಡೆಸಿದರು.
ಬಂದರು ವಿಸ್ತರಣೆ, ಅಲೆ ತಡೆಗೋಡೆ ನಿರ್ಮಾಣದ ಕುರಿತ ನಕ್ಷೆ ಪರಿಶೀಲಿಸಿದ ಅವರು, ಬಂದರು ಅಧಿಕಾರಿಗಳು ಹಾಗೂ ಮೀನುಗಾರರೊಂದಿಗೆ ಚರ್ಚೆ ನಡೆಸಿದರು. ಈ ಯೋಜನೆಯಿಂದ ಮೀನುಗಾರರಿಗೆ ತೀವ್ರ ತೊಂದರೆಯಾಗಲಿದೆ ಎಂದು ಹೇಳಿದರು.
ಈಗಾಗಲೇ ನೌಕಾನೆಲೆಗಾಗಿ 12 ಬೀಚ್ಗಳನ್ನು ಕಳೆದುಕೊಂಡಿದ್ದೇವೆ. ಈಗಿರುವ ಇದೊಂದು ಬೀಚ್ಅನ್ನು ಕಳೆದುಕೊಳ್ಳುವ ಪರಿಸ್ಥಿತಿಗೆ ಬಂದಿದ್ದೇವೆ. ಒಂದು ವೇಳೆ ಯೋಜನೆ ಜಾರಿಯಾದರೆ ಈ ಬೀಚ್ನಿಂದ ಬದುಕು ಕಟ್ಟಿಕೊಂಡಿರುವ ಮೀನುಗಾರರಿಗೆ ಸಾಕಷ್ಟು ತೊಂದರೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಂದರು ವಿಸ್ತರಣೆ ಕಾಮಗಾರಿ ಪರಿಶೀಲಿಸಿದ ಮಧ್ವರಾಜ್ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರವಾರದ ಕಡಲತೀರ ಅತಿ ಹೆಚ್ಚು ಸುರಕ್ಷಿತ ಹಾಗೂ ಹೆಚ್ಚು ಮೀನು ಸಿಗುವ ಸ್ಥಳ. ಇಲ್ಲಿನ ಮೀನುಗಾರರು ಎಷ್ಟು ಅದೃಷ್ಟವಂತರೋ, ಅಷ್ಟೆ ನತದೃಷ್ಟರು ಕೂಡ. ಈಗಾಗಲೇ ನೌಕಾನೆಲೆಗಳ ಯೋಜನೆಗಳಿಗಾಗಿ ಕಡಲ ತೀರದ ಜಾಗಗಳನ್ನು ಬಿಟ್ಟುಕೊಟ್ಟು, ಮೀನುಗಾರರು ಬದುಕು ಕಳೆದುಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇದೀಗ ಇರುವ ಒಂದು ಬೀಚ್ ಅನ್ನು ಕೂಡ ವಾಣಿಜ್ಯ ಬಂದರಿನ ವಿಸ್ತರಣೆಗೆ ಬಳಸಿಕೊಳ್ಳಲಾಗುತ್ತದೆ. ಈ ಬಗ್ಗೆ ಸಚಿವರೊಂದಿಗೆ ಮಾತನಾಡಿದಾಗ ನೀವು ಸ್ಥಳ ಪರಿಶೀಲನೆ ನಡೆಸಿ, ಮೀನುಗಾರರಿಗೆ ತೊಂದರೆ ಆಗುತ್ತಿದ್ದರೆ ಹೇಳಿ ಅಂತಾ ಸಚಿವರು ಹೇಳಿದ್ದರು. ಆದರೆ, ಇಲ್ಲಿ ನೋಡಿದರೇ ಈ ಯೋಜನೆಯಿಂದ ಮೀನುಗಾರರ ಹೊಟ್ಟೆ ಮೇಲೆ ಹೊಡೆಯಲಾಗುತ್ತಿದೆ ಎಂದರು.
ಪ್ರಸ್ತುತ ಮೀನುಗಾರರು ಮುಂದೇನು ಮಾಡಬೇಕು ಎಂಬ ಆತಂಕದಲ್ಲಿದ್ದಾರೆ. ಈ ಕಾರಣದಿಂದ ಮೀನುಗಾರರ ಸಚಿವರಾಗಿ ಬಂದು ಸಮಸ್ಯೆ ಆಲಿಸುವಂತೆ ಒತ್ತಾಯಿಸಿದ್ದೇನೆ. ಅಧಿಕಾರಿಗಳು ಸಚಿವರಿಗೆ ಸೂಕ್ತ ಮಾಹಿತಿ ನೀಡಿಲ್ಲ. ಇದರಿಂದ ಇಂತಹ ಸಮಸ್ಯೆ ಎದುರಾಗಿದೆ. ಮೀನುಗಾರರಿಗೆ ತೊಂದರೆಯಾಗುವ ಯೋಜನೆಯನ್ನು ಕೂಡಲೇ ಕೈ ಬಿಡಬೇಕು ಎಂದು ಒತ್ತಾಯಿಸಿದರು.