ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತ : ಶಿರಸಿಯಲ್ಲಿ ಸಚಿವ ಮಧು ಬಂಗಾರಪ್ಪ

ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಬರುವ ಶಾಸಕರು ನಮ್ಮ ಪಕ್ಷಕ್ಕೆ ಬರಬಹುದು ಎಂದಿದ್ದಾರೆ.

ಮಧುಬಂಗಾರಪ್ಪ
ಮಧು ಬಂಗಾರಪ್ಪ

By ETV Bharat Karnataka Team

Published : Aug 28, 2023, 12:17 PM IST

ಮಧು ಬಂಗಾರಪ್ಪ ಮಾಧ್ಯಮ ಹೇಳಿಕೆ

ಶಿರಸಿ(ಉತ್ತರ ಕನ್ನಡ):ಕಾಂಗ್ರೆಸ್​ ಪಕ್ಷಕ್ಕೆ ಈಗಾಗಲೇ ಹೊಟ್ಟೆ ತುಂಬಿದೆ. ಆದರೆ ಬೇರೆಯವರು ಬಂದು ಊಟ ಮಾಡುವಷ್ಟು ತಟ್ಟೆಯಲ್ಲಿ ಊಟವಿದೆ. ಕಾರಣ ಪಕ್ಷದ ಹಿತದೃಷ್ಟಿಯಿಂದ ಬೇರೆ ಪಕ್ಷದ ನಾಯಕರು ಬಂದಲ್ಲಿ ಸ್ವಾಗತ ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.‌

ಶಿರಸಿಯಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಬರುವ ಶಾಸಕರಿಗೆ, ಮಾಜಿ ಶಾಸಕರಿಗೆ ಬರಲು ಸ್ವಾಗತ. ಅಸಮಾಧಾನ ಇದ್ದಲ್ಲಿ ಅದನ್ನು ಹಿರಿಯ ನಾಯಕರು ಬಗೆಹರಿಸುತ್ತಾರೆ. ಕೆಲವೊಮ್ಮೆ ಅನಿವಾರ್ಯವಾಗಿ ಪಕ್ಷ ಸೇರ್ಪಡೆ ಮಾಡಿಕೊಳ್ಳಬೇಕಾಗುತ್ತದೆ ಎಂದರು.

ಮುಂದುವರೆದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಕಾರವಾರ ಮತ್ತು ಶಿವಮೊಗ್ಗ ಕ್ಷೇತ್ರವನ್ನು ನೂರಕ್ಕೆ ನೂರರಷ್ಟು ಗೆಲ್ಲುತ್ತೇವೆ. ಇದರ ಜೊತೆಗೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್​ಗೆ ನಾವು ತಯಾರಾಗಿದ್ದು, ಖಂಡಿತ ಕಾಂಗ್ರೆಸ್ ಹೆಚ್ಚಿನ ಕಡೆ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಣಿಪುರಕ್ಕೆ ಮೋದಿ ಯಾಕೆ ಹೋಗಿಲ್ಲ?: ಪ್ರಧಾನಿ ಅವರು ದೇಶಕ್ಕೆ ತಂದೆಯಿದ್ದಂತೆ. ಅವರು ಸಂತೋಷದ ಸಮಯದಲ್ಲಿ ಇಸ್ರೋ ಭೇಟಿಯಿಂದ ಬೆಂಗಳೂರಿಗೆ ಸೀದಾ ಬಂದಂತೆ, ಕಷ್ಟದಲ್ಲಿ ಇರುವ ಮಣಿಪುರಕ್ಕೆ ಯಾಕೆ ಹೋಗಿಲ್ಲ?. ಈ ಪ್ರಶ್ನೆಗೆ ಬಿಜೆಪಿಯ ಯಾವುದೇ ಒಬ್ಬ ನಾಯಕ ಅಥವಾ ಕಾರ್ಯಕರ್ತ ಇದಕ್ಕೆ ಉತ್ತರಿಸಲಿ. ಜೊತೆಗೆ ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಬಂದಾಗ ಬಿಜೆಪಿ ನಾಯಕರನ್ನು ಇಡಬೇಕಾದ ಜಾಗದಲ್ಲಿ ಇಟ್ಟಿದ್ದಾರೆ. ವಿರೋಧ ಪಕ್ಷದ ನಾಯಕರೇ ಇಲ್ಲದ ಬಿಜೆಪಿ ಮೋದಿ ಹೆಸರಲ್ಲಿ ಮತ ಕೇಳಿದ್ದರು. ಈಗ ಅದೇ ಮೋದಿ ಇವರನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ವ್ಯಂಗ್ಯವಾಡಿದರು.

ಕೆಲಸ ಇಲ್ಲದ ವಿರೋಧ ಪಕ್ಷದವರು ಗ್ಯಾರಂಟಿ ಯೋಜನೆಯ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಆದರೆ ಸರ್ಕಾರ ಬಂದು ಕೇವಲ 100 ದಿನದಲ್ಲಿ ನಾವು ಹೇಳಿದ್ದ ಗ್ಯಾರಂಟಿಯನ್ನು ಅನುಷ್ಠಾನ ಮಾಡಿದ್ದೇವೆ. ದೇಶದಲ್ಲೇ ಯೋಜನೆಯ ಬಗ್ಗೆ ಮಾತನಾಡುವ ರೀತಿ ಜಾರಿಗೆ ತರಲಾಗಿದೆ. ವಿರೋಧ ಪಕ್ಷದವರು ಟೀಕೆ ಟಿಪ್ಪಣಿ ನಿಲ್ಲಿಸಿ ಸರ್ಕಾರದ ಯೋಜನೆಗಳನ್ನು ಬೆಂಬಲಿಸಲಿ ಎಂದರು.

ಮುಂದಿನ ದಿನಗಳಲ್ಲಿ ಹೆಚ್ಚಿನ ಶಿಕ್ಷಕರನ್ನು ‌ನೇಮಕ ಮಾಡಿಕೊಳ್ಳುವ ಬಗ್ಗೆ ಯೋಚಿಸಲಾಗುತ್ತಿದೆ. ಶೇಕಡ.70, 80 ರಷ್ಟು ಸಮಸ್ಯೆ ನೀಗಿಸುವಷ್ಟು ಮಾಡಲಾಗುತ್ತಿದೆ. ಜೊತೆಗೆ ಶಾಲೆಯಲ್ಲಿ ಕೊಠಡಿ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತದೆ ಎಂದು ಹೇಳಿದರು. ಇದೇ ವೇಳೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನಾರಾಯಣ ಭಾಗ್ವತ್ ಅವರಿಗೆ ಮಧು ಬಂಗಾರಪ್ಪ ಶುಭಾಶಯ ಕೋರಿದರು. ಈ ವೇಳೆ ಶಾಸಕ ಭೀಮಣ್ಣ ನಾಯ್ಕ ಕೂಡ ಉಪಸ್ಥಿತರಿದ್ದರು.

ಇದನ್ನೂ ಓದಿ:ಬಿಜೆಪಿ ತೊರೆದು ಯಾರೂ ಕಾಂಗ್ರೆಸ್ ಸೇರುವುದಿಲ್ಲ: ಕೇಂದ್ರ ಸಚಿವ ಭಗವಂತ್ ಖೂಬಾ

ABOUT THE AUTHOR

...view details