ಶಿರಸಿ: ರಾಜ್ಯದ ವಿವಿಧ ಭಾಗದಲ್ಲಿ ಜಾನುವಾರುಗಳಿಗೆ ಕಾಣಿಸಿಕೊಳ್ಳುತ್ತಿರುವ ಚರ್ಮಗಂಟು ಅಥವಾ ಚರ್ಮ ಮುದ್ದೆ ರೋಗ ಇದೀಗ ಉತ್ತರ ಕನ್ನಡ ಜಿಲ್ಲೆಗೂ ಕಾಲಿಟ್ಟಿದ್ದು, ಅದರಲ್ಲೂ ಶಿರಸಿ ಭಾಗದಲ್ಲೇ 40ಕ್ಕೂ ಅಧಿಕ ಪ್ರಕರಣ ಕಾಣಿಸಿಕೊಂಡಿದ್ದು, ಹೈನುಗಾರರ ನಿದ್ದೆಗೆಡಿಸಿದೆ.
ಚರ್ಮಗಂಟು ರೋಗ ಅಥವಾ ಚರ್ಮ ಮುದ್ದೆ ರೋಗ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಕ್ಯಾಪ್ರಿಫಾಕ್ಸ್ (ಫಾಕ್ಸ್ ಎರೀಡೆ) ಎಂಬ ವೈರಾಣುವಿನಿಂದ ಬರುತ್ತದೆ. ದನ, ಎಮ್ಮೆಗಳಲ್ಲಿ ಅದರಲ್ಲೂ ಮಿಶ್ರತಳಿ ರಾಸುಗಳಲ್ಲಿ ಕರುಗಳಲ್ಲಿ ಅತಿಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಅತಿಯಾದ ಜ್ವರ (105°F– 108°F) ಕಣ್ಣುಗಳಿಂದ ನೀರು ಸೋರುವುದು, ನಿಶಕ್ತಿ, ಕಾಲುಗಳಲ್ಲಿ ಬಾವು ಹಾಗೂ ಕುಂಟುವುದು ಜಾನುವಾರುಗಳ ಚರ್ಮದ ಮೇಲೆ 2-5ಸೆ.ಮೀ ನಷ್ಟು ಅಗಲವಿರುವ ಗುಳ್ಳೆ ಕಾಣಿಸಿಕೊಂಡು ನಂತರ ಒಡೆದು ಗಾಯವಾಗಿ ನೋವುಂಟಾಗುತ್ತದೆ. ಇದಕ್ಕೆ ವಾಕ್ಸಿನ್ ಇದ್ದರೂ ಸಹ ಅದರ ಬದಲಿಗೆ ಸಂಪೂರ್ಣ ಗುಣವಾಗುವ ಔಷಧ ಬೇಕು ಎಂದು ಹೈನುಗಾರರು ಒತ್ತಾಯಿಸಿದ್ದಾರೆ.