ಕಾರವಾರ: ಆಗ ತಾನೇ ಜನಿಸಿದ ಹಸುಗೂಸನ್ನು ಕೊಂದು ಸ್ಮಶಾನದ ಬಳಿ ಎಸೆದಿರುವ ಅಮಾನವೀಯ ಪ್ರಕರಣ ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ವಿಕೃತಿ ಮೆರೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ಪ್ರೇಮಿಗಳು ಸೇರಿ ನಾಲ್ವರನ್ನು ಹೊನ್ನಾವರ ತಾಲೂಕಿನ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಹೊನ್ನಾವರ ತಾಲೂಕಿನ ಹಳದಿಪುರದಲ್ಲಿ ಈ ಪ್ರಕರಣ ನಡೆದಿದೆ. ಏ.15ರಂದು ಹಳದಿಪುರದ ಸಾಲಿಕೇರಿ ಸ್ಮಶಾನದ ಪಕ್ಕದ ಗುಡ್ಡದ ನಿರ್ಜನ ಪ್ರದೇಶದಲ್ಲಿ ನವಜಾತ ಶಿಶುವಿನ ಮೃತದೇಹವೊಂದು ಪತ್ತೆಯಾಗಿತ್ತು. ಈ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಬಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನಿಖೆ ಕೈಗೊಂಡ ಪೊಲೀಸರಿಗೆ ಮದುವೆಗೂ ಮುನ್ನವೇ ಲೈಂಗಿಕ ಸಂಪರ್ಕ ನಡೆಸಿದ್ದರಿಂದ ಮಗು ಜನಿಸಿದೆ. ಯುವತಿಯ ಪಾಲಕರು ಹಾಗೂ ಪ್ರಿಯಕರನ ಒಪ್ಪಿಗೆ ಮೇರೆಗೆ ಮರ್ಯಾದೆಗೆ ಅಂಜಿ ಹಸುಗೂಸನ್ನು ಕೊಲೆಗೈದು ಎಸೆದಿರುವ ವಿಚಾರ ಬೆಳಕಿಗೆ ಬಂದಿದೆ.
ಪ್ರಕರಣದ ಸಂಬಂಧ ಮೃತ ಶಿಶುವಿನ ತಾಯಿ ನೇತ್ರಾವತಿ ಮುಕ್ರಿ, ಪ್ರಿಯಕರ ಕರ್ಕಿಯ ವಿಶ್ವನಾಥ ಮುಕ್ರಿ ಹಾಗೂ ಅಪರಾಧಕ್ಕೆ ನೆರವಾದ ಯುವತಿಯ ಪಾಲಕರಾದ ತಿಮ್ಮಪ್ಪ ಮುಕ್ರಿ ಮತ್ತು ಪರಮೇಶ್ವರಿ ಮುಕ್ರಿಯನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ವಿಶ್ವನಾಥ ಮತ್ತು ನೇತ್ರಾವತಿ ಅವರು ಪರಸ್ಪರ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು. ಇಬ್ಬರ ನಡುವಿನ ಪ್ರೀತಿ ಲೈಂಗಿಕ ಸಂಪರ್ಕಕ್ಕೆ ತಿರುಗಿತ್ತು. ಹೀಗಾಗಿ ನೇತ್ರಾವತಿ ಗರ್ಭ ಧರಿಸಿದ್ದರೂ ಆಕೆಯ ಮನೆಯವರ ಪ್ರತಿರೋಧವಿಲ್ಲದ ಕಾರಣ ಇಬ್ಬರ ನಡುವಿನ ‘ಸಂಬಂಧ’ ನಿರಾತಂಕವಾಗಿ ಮುಂದುವರಿದಿತ್ತು. ಈ ನಡುವೆ 9 ತಿಂಗಳು ತುಂಬಿದ ಗರ್ಭಿಣಿ ನೇತ್ರಾವತಿಗೆ ಮನೆಯಲ್ಲೇ ಹೆರಿಗೆ ಕೂಡ ಮಾಡಿಸಲಾಗಿದೆ. ಆದರೆ, ಮದುವೆಗೂ ಮೊದಲೇ ಮಗುವಾದರೆ ಸಮಾಜದಲ್ಲಿ ಮರ್ಯಾದೆ ಇರುವುದಿಲ್ಲ ಎಂದು ಜವಜಾತ ಶಿಶುವನ್ನು ನೇತ್ರಾವತಿಯೇ ತನ್ನ ಪ್ರಿಯಕರನ ಜೊತೆ ತೆರಳಿ ಗುಡ್ಡದಲ್ಲಿ ಎಸೆದು ಬಂದಿದ್ದಳು ಎನ್ನಲಾಗ್ತಿದೆ.