ಕರ್ನಾಟಕ

karnataka

ETV Bharat / state

ಕೊರೊನಾ ಹತೋಟಿಗೆ ಬಂದರೂ ಲಾಕ್​ಡೌನ್​​ ಸಡಿಲಿಕೆ ಬಗ್ಗೆ ಗೊಂದಲದಲ್ಲಿ ಉತ್ತರ ಕನ್ನಡ ಜನತೆ! - ಉತ್ತರಕನ್ನಡ ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಿಲಿಕೆ

ಹನ್ನೊಂದು ಪಾಸಿಟಿವ್ ಪ್ರಕರಣಗಳಿಂದ ಒಂದು ಪಾಸಿಟಿವ್ ಪ್ರಕರಣಕ್ಕೆ ಬಂದು ನಿಂತಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಿಲಿಕೆ ಕುರಿತು ಇನ್ನೂ ಸಹ ಗೊಂದಲ ಮುಂದುವರೆದಿದೆ.

lockdown-relax-in-karavara
ಕೊರೊನಾ ಹತೋಟಿಗೆ ಬಂದರೂ ಆಗಲಿಲ್ಲ ಸಡಿಲಿಕೆ

By

Published : Apr 29, 2020, 8:13 PM IST

ಕಾರವಾರ:ಹಾಟ್‌ಸ್ಪಾಟ್ ಪಟ್ಟಿಯಲ್ಲಿದ್ದ ಉತ್ತರ ಕನ್ನಡ ಜಿಲ್ಲೆಯಲ್ಲಿ 11 ಸೋಂಕಿತರ ಪೈಕಿ 10 ಜನರು ಗುಣಮುಖರಾಗಿ ಹಳದಿ ಝೋನ್‌ಗೆ ಬಂದಿದೆ. ಆದ್ರೆ ಕೊರೊನಾ ನಿಯಂತ್ರಣಕ್ಕೆ ಬಂದರೂ ಸಹ ಜಿಲ್ಲಾಡಳಿತ ಲಾಕ್‌ಡೌನ್ ಸಡಿಲಿಕೆಗೆ ಮುಂದಾಗದಿರೋದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಹೌದು, ಮಹಾಮಾರಿ ಕೊರೊನಾ ಅಟ್ಟಹಾಸಕ್ಕೆ ಇಡೀ ದೇಶವೇ ತತ್ತರಿಸಿ ಹೋಗಿದ್ದು, ಎರಡನೇ ಹಂತದ ಲಾಕ್‌ಡೌನ್ ಯಶಸ್ವಿಯಾಗಿ ಮುಗಿಯುವ ಹಂತಕ್ಕೆ ತಲುಪುತ್ತಿದೆ. ಈ ನಡುವೆ ರಾಜ್ಯದ ಗ್ರೀನ್ ಝೋನ್ ಜಿಲ್ಲೆಗಳಿಗೆ ಲಾಕ್‌ಡೌನ್ ವಿನಾಯಿತಿ ನೀಡಲಾಗಿದ್ದು, ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಆದ್ರೆ ಹನ್ನೊಂದು ಪಾಸಿಟಿವ್ ಪ್ರಕರಣಗಳಿಂದ ಒಂದು ಪಾಸಿಟಿವ್ ಪ್ರಕರಣಕ್ಕೆ ಬಂದು ನಿಂತಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಿಲಿಕೆ ಕುರಿತು ಇನ್ನೂ ಸಹ ಗೊಂದಲ ಮುಂದುವರೆದಿದೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕು​​ ಒಂದರಲ್ಲೇ 11 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಇಡೀ ಜಿಲ್ಲೆ ಕೊರೊನಾ ಹಾಟ್‌ಸ್ಪಾಟ್ ಆಗಿ ಗುರುತಿಸಿಕೊಂಡಿತ್ತು. ಈಗಾಗಲೇ ಎಲ್ಲಾ ಪಾಸಿಟಿವ್ ಪ್ರಕರಣಗಳಿಗೂ ಸೂಕ್ತ ಚಿಕಿತ್ಸೆ ನೀಡಿದ್ದು, ಹತ್ತು ಮಂದಿ ಈಗಾಗಲೇ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.

ಹೀಗಾಗಿ ಜಿಲ್ಲೆಯನ್ನ ಹಳದಿ ಝೋನ್ ಎಂದು ಸರ್ಕಾರ ಘೋಷಣೆ ಮಾಡಿದ್ದು, ಲಾಕ್‌ಡೌನ್‌ನಿಂದ ಕೆಲವೊಂದು ಸಡಿಲಿಕೆ ನೀಡಲಾಗಿದೆ. ಆದ್ರೆ ಸಡಿಲಿಕೆ ಹಿನ್ನೆಲೆ ನಗರ ಪ್ರದೇಶದಲ್ಲಿ ತರಕಾರಿ, ಹಣ್ಣು ವ್ಯಾಪಾರ, ಕಿರಾಣಿ ಹಾಗೂ ಮೆಡಿಕಲ್‌ ಸೇರಿದಂತೆ ಕೆಲವೇ ಕೆಲವು ಅಂಗಡಿಗಳು ತೆರೆದಿದ್ದು, ಇತರೆ ಯಾವುದೇ ವಸ್ತುಗಳೂ ಲಭ್ಯವಿಲ್ಲದಂತಾಗಿದೆ. ಹೀಗಾಗಿ ಸಡಿಲಿಕೆ ಹಿನ್ನೆಲೆ ಅಗತ್ಯ ವಸ್ತುಗಳ ಖರೀದಿಗಾಗಿ ಜನರು ಓಡಾಟ ನಡೆಸುತ್ತಿದ್ದು, ಕೆಲವೊಂದು ಅಂಗಡಿಗಳು ತೆರೆಯದೇ ಇರೋದು ಜನರಿಗೆ ಲಾಕ್‌ಡೌನ್ ಸಡಿಲಿಕೆ ಆಗಿದೆಯೇ ಇಲ್ಲವೇ ಎಂಬ ಗೊಂದಲ ಮೂಡಿಸಿದೆ.

ಇನ್ನು ಈ ಬಗ್ಗೆ ಜಿಲ್ಲಾಧಿಕಾರಿಗಳನ್ನ ಕೇಳಿದ್ರೆ, ಝೋನ್ ಬದಲಾವಣೆಯಾದ ಮಾತ್ರಕ್ಕೆ ಜನರು ಅನಗತ್ಯವಾಗಿ ತಿರುಗಾಟ ನಡೆಸಲು ಅನುಮತಿ ಇಲ್ಲ. ಲಾಕ್‌ಡೌನ್ ಸಡಿಲಿಕೆ ನೀಡಿದರೂ ಸಹ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಓಡಾಟವನ್ನ ಆದಷ್ಟು ಕಡಿಮೆ ಮಾಡಬೇಕು ಎಂದಿದ್ದಾರೆ.

ABOUT THE AUTHOR

...view details