ಕಾರವಾರ: ಅದು ನದಿಪಾತ್ರಕ್ಕೆ ಹೊಂದಿಕೊಂಡಿರುವ ಗ್ರಾಮ. ಕಳೆದ ಮೂರು ವರ್ಷಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ಸತತವಾಗಿ ಪ್ರವಾಹ ಎದುರಿಸುವಂತಾಗಿದೆ. ಇದರ ನಡುವೆ ಸರ್ಕಾರ ಇದೇ ಪ್ರದೇಶದಲ್ಲಿ ನದಿಗೆ ಅಡ್ಡಲಾಗಿ ಕಿಂಡಿ ಆಣೆಕಟ್ಟನ್ನು ನಿರ್ಮಿಸಲು ಇದೀಗ ಯೋಜನೆ ರೂಪಿಸುತ್ತಿದ್ದು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ನೂರಾರು ಕುಟುಂಬಗಳ ಬದುಕು ದುಸ್ತರ.. ಕರಾವಳಿ ಜಿಲ್ಲೆ ಉತ್ತರಕನ್ನಡದ ಜೀವನಾಡಿಗಳಲ್ಲಿ ಗಂಗಾವಳಿ ನದಿ ಕೂಡ ಒಂದು. ನದಿಗೆ ಹೊಂದಿಕೊಂಡೇ ಹತ್ತಾರು ಗ್ರಾಮಗಳಿದ್ದು, ನೂರಾರು ಕುಟುಂಬಗಳು ಕೃಷಿ, ತೋಟಗಾರಿಕೆ ಹಾಗೂ ಮೀನುಗಾರಿಕೆಯನ್ನು ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಅಲ್ಲದೇ ಕದ್ರಾ, ಕೊಡಸಳ್ಳಿ ಜಲಾಶಯ ಯೋಜನೆಯ ನಿರಾಶ್ರಿತರು ಇದೇ ನದಿಯ ತಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಧಾರಾಕಾರ ಮಳೆಯಿಂದ ಸತತವಾಗಿ ನೆರೆ ಪ್ರವಾಹ ಎದುರಾಗಿದ್ದು, ಜನರು ಜೀವನ ನಡೆಸಲು ಪರದಾಡುವಂತಾಗಿತ್ತು. ತಾವು ಬೆಳೆದ ಬೆಳೆ ಸೇರಿದಂತೆ ಹಲವರು ಮನೆಗಳನ್ನು ಕೂಡ ಕಳೆದುಕೊಂಡಿದ್ದರು.
ಆದರೆ ಇದೇ ಗಂಗಾವಳಿ ನದಿಗೆ ಅಡ್ಡಲಾಗಿ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಕಿಂಡಿ ಅಣೆಕಟ್ಟನ್ನು ಕಟ್ಟಲು ಸರ್ಕಾರ ಯೋಜನೆ ರೂಪಿಸಿದ್ದು ಇದರ ಅನುಷ್ಠಾನಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನದಿ ಸರಾಗವಾಗಿ ಹರಿದುಹೋಗುವಾಗಲೇ ನೆರೆ ಪ್ರವಾಹ ಉಂಟಾಗಿದ್ದು, ಚೆಕ್‌ಡ್ಯಾಂ ನಿರ್ಮಾಣವಾದಲ್ಲಿ ಈ ಭಾಗದ ಗ್ರಾಮಗಳು ಸಂಪೂರ್ಣ ಮುಳುಗಡೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಯಾವುದೇ ಕಾರಣಕ್ಕೂ ಕಿಂಡಿ ಅಣೆಕಟ್ಟು ಯೋಜನೆ ಜಾರಿಯಾಗಬಾರದು ಅನ್ನೋದು ಗ್ರಾಮಸ್ಥರ ಬೇಡಿಕೆಯಾಗಿದೆ.