ಕಾರವಾರ: ಸಕ್ರಮ ಮದ್ಯದೊಂದಿಗೆ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದಾಗ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 1 ಕೋಟಿ ರೂ ಮೌಲ್ಯದ ಗೋವಾ, ಕರ್ನಾಟಕದ ಮದ್ಯ ಜಪ್ತಿ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿಯಲ್ಲಿ ಘಟನೆ ನಡೆದಿದೆ. ಕರ್ನಾಟಕದ ಬಡ್‌ವೈಸರ್ ಮ್ಯಾಗ್ನಮ್, ಅಮೆರಿಕನ್ ವಿಸ್ಕಿ ಬಾಟಲ್‌ಗಳು ಗೋವಾದಲ್ಲಿ ತಯಾರಾಗಿದ್ದು, ಅಲ್ಲಿಂದ ಕರ್ನಾಟಕಕ್ಕೆ ಪೂರೈಕೆಯಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿರುವ ಕರ್ನಾಟಕ ಸ್ಟೇಟ್ ಬೆವರೇಜಸ್ ಕಾರ್ಪೋರೇಶನ್ ಲಿಮಿಟೆಡ್ ನೀಡಿದ ಬೇಡಿಕೆಯಂತೆ ಗೋವಾದಿಂದ ಗೂಡ್ಸ್ ಟ್ರಕ್‌ಗಳಲ್ಲಿ ಆಗಾಗ ಮದ್ಯದ ಬಾಕ್ಸ್‌ಗಳನ್ನು ಕಳುಹಿಸಿ ಕೊಡಲಾಗುತ್ತದೆ. ಕರ್ನಾಟಕದಲ್ಲಿ ಒಂದು ಬಾಟಲ್‌ಗೆ ಸುಮಾರು 2,500 ರೂ. ಹೊಂದಿರುವ 4,800 ಬಾಟಲ್‌ಗಳನ್ನು, ಅಂದ್ರೆ 400 ಬಾಕ್ಸ್ ಮದ್ಯವನ್ನು ಪರವಾನಗಿಸಮೇತ ಟ್ರಕ್‌ನಲ್ಲಿ ಬೆಂಗಳೂರಿಗೆ ತರಲಾಗುತ್ತಿತ್ತು.
ಲಾರಿ ಚಾಲಕ ಇದರೊಂದಿಗೆ ಅಕ್ರಮವಾಗಿ 9 ಬಾಕ್ಸ್‌ಗಳಲ್ಲಿ 108 ಬಾಟಲ್ ಗೋವಾ ರಾಜ್ಯದ ಪರವಾನಗಿಯ ಮ್ಯಾನ್ಶನ್ ಹೌಸ್ ಫ್ರೆಂಚ್ ವಿಸ್ಕಿ ಸಾಗಿಸುತ್ತಿದ್ದ. ಟ್ರಕ್‌ನಲ್ಲಿ ಮೊದಲು ಈ ಅಕ್ರಮ ಮದ್ಯಗಳ ಬಾಕ್ಸ್‌ಗಳನ್ನಿಟ್ಟು, ಬಳಿಕ ಪರವಾನಗಿ ಇದ್ದ 1 ಕೋಟಿ 19 ಲಕ್ಷ ರೂಪಾಯಿ ಮೌಲ್ಯದ ಸಕ್ರಮ ಮದ್ಯವನ್ನು ಜೋಡಿಸಿಕೊಂಡು ಸಾಗಿಸಲು ಮುಂದಾಗಿದ್ದಾನೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಬಕಾರಿ ಉಪ ಆಯುಕ್ತೆ ವನಜಾಕ್ಷಿ ಎಂ. ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಖುದ್ದು ತಾವೇ ಗೋವಾ-ಕರ್ನಾಟಕ ಗಡಿ ಮಾಜಾಳಿ ಚೆಕ್‌ಪೋಸ್ಟ್‌ಗೆ ತಮ್ಮ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಪಹರೆ ಕಾಯುತ್ತಿದ್ದರು. ಎಂದಿನಂತೆ ವಾಹನಗಳ ತಪಾಸಣೆ ನಡೆಸುವಾಗ ಟ್ರಕ್ ಬಂದಿದ್ದು, ಅಕ್ರಮ ಮದ್ಯಗಳಿರುವುದು ಪತ್ತೆಯಾಗಿದೆ.