ಕರ್ನಾಟಕ

karnataka

ETV Bharat / state

ಕಡಲ ತೀರದಲ್ಲಿ ಮೈಮರೆಯುವ ಪ್ರವಾಸಿಗರು : ಲೈಫ್ ಗಾರ್ಡ್‌ಗಳಿಲ್ಲದೆ ಹೆಚ್ಚುತ್ತಿರುವ ಸಾವಿನ ಪ್ರಕರಣ - Karwar

ಎಲ್ಲಾ ಬೀಚ್‌ಗಳಲ್ಲಿ ಲೈಫ್‌ಗಾರ್ಡ್‌ಗಳ ನೇಮಕ ಹಂತ-ಹಂತವಾಗಿ ಮಾತ್ರ ನಡೆಸಲು ಸಾಧ್ಯ. ಅವರಿಗೆ ವಿಶೇಷವಾಗಿ ವೇತನ ನೀಡುವ ವ್ಯವಸ್ಥೆಯಿಲ್ಲ. ಜಿಲ್ಲಾ ಪ್ರವಾಸೋದ್ಯಮ ಸಮಿತಿಯ ಆದಾಯದ ಮೇಲೆಯೇ ಅವರಿಗೆ ವೇತನ ನೀಡಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ಸ್ಥಳೀಯವಾಗಿ ಇದನ್ನ ನಿರ್ವಹಿಸುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ..

karwar
ಕಡಲ ತೀರದಲ್ಲಿ ಲೈಫ್ ಗಾರ್ಡ್‌ಗಳಿಲ್ಲದೆ ಹೆಚ್ಚುತ್ತಿರುವ ಸಾವಿನ ಪ್ರಕರಣ..

By

Published : Oct 23, 2021, 3:38 PM IST

ಕಾರವಾರ :ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಜಿಲ್ಲೆಯ ಕಡಲ ತೀರಗಳಿಗೆ ಆಗಮಿಸುವ ಪ್ರವಾಸಿಗರು ನೀರಲ್ಲಿ ಇಳಿದು ಎಂಜಾಯ್ ಮಾಡುತ್ತಿದ್ದಾರೆ. ಹೀಗೆ ಮೋಜು-ಮಸ್ತಿಯಲ್ಲಿ ತೊಡಗಿಕೊಳ್ಳುವ ಪ್ರವಾಸಿಗರು ಸಮುದ್ರದ ಅಲೆಗಳಿಗೆ ಸಿಲುಕಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಕಡಲ ತೀರದಲ್ಲಿ ಈ ಹಿಂದೆ ಇದ್ದ ಲೈಫ್‌ಗಾರ್ಡ್‌ಗಳು ಕೊರೊನಾ ಬಳಿಕ ನೇಮಕಗೊಳ್ಳದಿರುವುದೇ ಪ್ರವಾಸಿಗರ ಸಾವಿಗೆ ಕಾರಣ ಎನ್ನಲಾಗುತ್ತಿದೆ.

ಕಡಲ ತೀರದಲ್ಲಿ ಲೈಫ್ ಗಾರ್ಡ್‌ಗಳಿಲ್ಲದೆ ಹೆಚ್ಚುತ್ತಿರುವ ಸಾವಿನ ಪ್ರಕರಣ..

ಪದೇಪದೆ ಹವಾಮಾನ ವೈಪರೀತ್ಯದಿಂದ ಸಮುದ್ರದಲ್ಲಿ ಕೆಲವೊಮ್ಮೆ ಭೀಕರ ಅಲೆಗಳು ಕಾಣಿಸಿಕೊಳ್ಳುತ್ತವೆ. ಇದರ ಅರಿವಿಲ್ಲದ ಪ್ರವಾಸಿಗರು ಸಮುದ್ರಕ್ಕೆ ಇಳಿದು ತಾವೇ ಸಂಕಷ್ಟ ತಂದು ಕೊಳ್ಳುತ್ತಿದ್ದಾರೆ. ಕಳೆದ ಎರಡ್ಮೂರು ತಿಂಗಳಲ್ಲಿ ಜಿಲ್ಲೆಯ ಹೊನ್ನಾವರ, ಕುಮಟಾ, ಅಂಕೋಲಾ, ಗೋಕರ್ಣ ಬೀಚ್‌ಗಳಲ್ಲಿ 7-8 ಜನರು ಸಾವನ್ನಪ್ಪಿದ್ದಾರೆ.

ಈವರೆಗೆ ಲೈಫ್‌ಗಾರ್ಡ್‌ಗಳ ನೇಮಕವಾಗಿಲ್ಲ :ಕಾರವಾರದಲ್ಲಿ ಇತ್ತೀಚೆಗೆ ನಡೆದ ಪ್ರಕರಣ ಸೇರಿ ಕೆಲವೆಡೆ ಸ್ಥಳೀಯ ಮೀನುಗಾರರು ಹಾಗೂ ನಿಗದಿತ ಕಡೆಗಳಲ್ಲಿ ನೇಮಿಸಿರುವ ಲೈಫ್‌ಗಾರ್ಡ್‌ಗಳು ಹಲವರ ಜೀವ ರಕ್ಷಣೆ ಮಾಡಿದ್ದಾರೆ. ಆದರೆ, ಜಿಲ್ಲೆಯಲ್ಲಿ 10ಕ್ಕೂ ಅಧಿಕ ಬೀಚ್‌ಗಳಿದ್ದರೂ ಎಲ್ಲಾ ಬೀಚ್‌ಗಳಲ್ಲಿ ಈವರೆಗೆ ಲೈಫ್‌ಗಾರ್ಡ್‌ಗಳ ನೇಮಕವೇ ಆಗಿಲ್ಲ.

ಆರ್ಥಿಕ ಸಮಸ್ಯೆಯಿಂದ ನೇಮಕ ವಿಳಂಬ :ಕೇವಲ ಮೂರು ನಾಲ್ಕು ಬೀಚ್‌ಗಳಲ್ಲಿ ಮಾತ್ರ 4-5 ಲೈಫ್‌ಗಾರ್ಡ್‌ಗಳನ್ನ ನೇಮಕ ಮಾಡಲಾಗಿದೆ. ಉಳಿದ ಬೀಚ್‌ಗಳಲ್ಲಿ ಪ್ರವಾಸಿಗರು ಸಂಕಷ್ಟಕ್ಕೀಡಾದರೆ ಜೀವ ರಕ್ಷಣೆಗೆ ಸ್ಥಳೀಯ ಮೀನುಗಾರರು ಹೊರತುಪಡಿಸಿ ಬೇರೆ ಯಾರೂ ಇಲ್ಲದಂತಾಗಿದೆ. ಆರ್ಥಿಕ ಸಮಸ್ಯೆಯಿಂದಾಗಿ ಜಿಲ್ಲಾಡಳಿತ ಲೈಫ್‌ ಗಾರ್ಡ್‌ಗಳ ನೇಮಕ ಮಾಡಿಲ್ಲ. ಇದರಿಂದ ಪ್ರವಾಸಿಗರು ಜೀವ ತೆರುವಂತಾಗಿದೆ.

ತೊಡಕು ನಿವಾರಣೆಗೆ ಕ್ರಮ :ಪ್ರವಾಸಿಗರ ರಕ್ಷಣೆ ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿ ವಿಚಾರವಾಗಿರುವ ಲೈಫ್‌ಗಾರ್ಡ್ ಸಮಸ್ಯೆ ಪರಿಹರಿಸಲು ಜಿಲ್ಲಾಡಳಿತ ಹೊಸ ಪ್ಲಾನ್​ಗೆ ಮುಂದಾಗಿದೆ. ಕಡಲ ತೀರದ ಪ್ರವಾಸೋದ್ಯಮಕ್ಕೆ ಈ ಬಾರಿ ವರುಣ ಅಡ್ಡಿಯಾಗಿದ್ದು, ಈವರೆಗೆ ಸ್ಥಗಿತಗೊಂಡಿದ್ದ ಲೈಫ್‌ಗಾರ್ಡ್ ಸೇವೆ ಇದೀಗ ಕೆಲವೆಡೆ ಮತ್ತೆ ಪ್ರಾರಂಭಿಸಲಾಗಿದೆ. ತರಬೇತಿ, ಪ್ರಮಾಣ ಪತ್ರ ಸೇರಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಏನೆಲ್ಲಾ ತೊಡಕುಗಳು ಎದುರಾಗಿದ್ದವೋ ಅವುಗಳನ್ನು ಒಂದೊಂದಾಗಿ ನಿವಾರಣೆ ಮಾಡುತ್ತಾ ಬರುತ್ತಿದೆ.

ಹಂತ-ಹಂತವಾಗಿ ನೇಮಕ :ಹೊರಗಿನ ಜಿಲ್ಲೆಯಿಂದ ಬರುವವರಿಗೆ ಕಡಲಿನ ಸ್ಥಿತಿಗತಿಯ ಬಗ್ಗೆ ಸಂಪೂರ್ಣ ಅರಿವು ಇರುವುದಿಲ್ಲ. ಹೀಗಾಗಿ, ಲೈಫ್‌ಗಾರ್ಡ್​ಗಳ ಸೂಚನೆ ಮೀರಿ ಯಾರೂ ಸಮುದ್ರಕ್ಕಿಳಿಯದಂತೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಇನ್ಮುಂದೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.‌

ಎಲ್ಲಾ ಬೀಚ್‌ಗಳಲ್ಲಿ ಲೈಫ್‌ಗಾರ್ಡ್‌ಗಳ ನೇಮಕ ಹಂತ-ಹಂತವಾಗಿ ಮಾತ್ರ ನಡೆಸಲು ಸಾಧ್ಯ. ಅವರಿಗೆ ವಿಶೇಷವಾಗಿ ವೇತನ ನೀಡುವ ವ್ಯವಸ್ಥೆಯಿಲ್ಲ. ಜಿಲ್ಲಾ ಪ್ರವಾಸೋದ್ಯಮ ಸಮಿತಿಯ ಆದಾಯದ ಮೇಲೆಯೇ ಅವರಿಗೆ ವೇತನ ನೀಡಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ಸ್ಥಳೀಯವಾಗಿ ಇದನ್ನ ನಿರ್ವಹಿಸುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಪ್ರವಾಸಿಗರ ಸುರಕ್ಷತೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಲೈಫ್‌ಗಾರ್ಡಗಳ ನೇಮಕಕ್ಕೆ ಜಿಲ್ಲಾಡಳಿತ ಹೊಸ ಯೋಜನೆ ರೂಪಿಸಿದೆ. ಈ ಮೂಲಕ ಜಿಲ್ಲೆಯ ಕಡಲ ತೀರಗಳಿಗೆ ಶೀಘ್ರದಲ್ಲೇ ಲೈಫ್‌ಗಾರ್ಡ್‌ಗಳ ನೇಮಕವಾಗಲಿದ್ದು, ಪ್ರವಾಸಿಗರಿಗೂ ರಕ್ಷಣೆ ಸಿಗುವಂತಾಗಲಿದೆ.

ABOUT THE AUTHOR

...view details