ಶಿರಸಿ: ರಾಜ್ಯ ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಸ್ಥಾನದ ಜಾತ್ರೆಯ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಡಾ.ವೆಂಕಟೇಶ್ ನಾಯ್ಕರಿಗೆ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ, ಗನ್ ಮ್ಯಾನ್ ಭದ್ರತೆಯನ್ನ ಒದಗಿಸಿದೆ.
ಜೀವ ಬೆದರಿಕೆ ಕರೆ: ಶಿರಸಿ ಮಾರಿಕಾಂಬಾ ಆಡಳಿತ ಮಂಡಳಿ ಅಧ್ಯಕ್ಷರಿಗೆ ಗನ್ಮ್ಯಾನ್ ಭದ್ರತೆ
ಬೆದರಿಕೆ ಕರೆ ಬಂದ ಹಿನ್ನೆ ಲೆಯಲ್ಲಿ ಶಿರಸಿಯ ಮಾರಿಕಾಂಬಾ ದೇವಸ್ಥಾನದ ಜಾತ್ರೆಯ ವೇಳೆ ಆಡಳಿತ ಮಂಡಳಿ ಅಧ್ಯಕ್ಷ ಡಾ.ವೆಂಕಟೇಶ್ ನಾಯ್ಕರಿಗೆ ಪೊಲೀಸ್ ಇಲಾಖೆ, ಗನ್ ಮ್ಯಾನ್ ಭದ್ರತೆ ಒದಗಿಸಿದೆ.
ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷರಾದ ನಂತರ ವೆಂಕಟೇಶ್ ನಾಯ್ಕರಿಗೆ ಬೆದರಿಕೆ ಪತ್ರಗಳು ಬಂದಿದ್ದವು. ಅಲ್ಲದೇ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು ಕೂರುವ ಕುರ್ಚಿಯ ಕೆಳಗೆ ವಾಮಾಚಾರ ಮಾಡಿಸಿ, ವಸ್ತುಗಳನ್ನ ಇಟ್ಟು ಹೆದರಿಸುವ ಕೆಲಸವನ್ನ ಕೆಲವರು ಮಾಡಿದ್ದರು. ಈ ಬಾರಿಯ ಜಾತ್ರೆಯ ದಿನಾಂಕ ಘೋಷಣೆಯಾದ ತಕ್ಷಣ ವೆಂಕಟೇಶ್ ನಾಯ್ಕರ ಮನೆಯ ಮುಂದೆ ಸಹ ಕುಂಬಳಕಾಯಿ ಒಡೆದು ವಾಮಾಚಾರ ನಡೆಸಿ, ಹೆದರಿಸುವ ಪ್ರಯತ್ನ ಮಾಡಲಾಗಿತ್ತು. ತನಗೆ ಜೀವ ಬೆದರಿಕೆ ಇದ್ದು, ತನ್ನ ಮನೆಯ ಬಳಿ ಸಂಶಯಾಸ್ಪದವಾಗಿ ಕೆಲವರು ಓಡಾಡುತ್ತಿದ್ದಾರೆ. ಸಿಸಿಟಿವಿಯಲ್ಲಿ ಈ ದೃಶ್ಯಗಳು ಸಹ ಸೆರೆಯಾಗಿದ್ದು, ತನಗೆ ಭದ್ರತೆ ಕೊಡುವಂತೆ ಜೊತೆಗೆ ಆರೋಪಿಗಳನ್ನ ಬಂಧಿಸುವಂತೆ ವೆಂಕಟೇಶ್ ನಾಯ್ಕ ದೂರು ನೀಡಿದ್ದರು.
ಈ ಬಗ್ಗೆ ಪರಿಶೀಲನೆ ನಡೆಸಿದ ಪೊಲೀಸ್ ಇಲಾಖೆ, ವೆಂಕಟೇಶ್ ನಾಯ್ಕರಿಗೆ ಕಳೆದ ಮೂರು ದಿನಗಳಿಂದ ಓರ್ವ ಗನ್ ಮ್ಯಾನ್ನನ್ನ ಒದಗಿಸಿದ್ದಾರೆ. ಶಿರಸಿ ಮಾರಿಕಾಂಬಾ ದೇವರ ಜಾತ್ರಾ ಮಹೋತ್ಸವ ರಾಜ್ಯದಲ್ಲಿಯೇ ದೊಡ್ಡ ಜಾತ್ರಾ ಮಹೋತ್ಸವವಾಗಿದ್ದು, ಜಾತ್ರಾ ಮಹೋತ್ಸವದ ವೇಳೆ ಯಾವುದೇ ಸಮಸ್ಯೆ ಎದುರಾಗಬಾರದು ಎನ್ನುವ ನಿಟ್ಟಿನಲ್ಲಿ ಪೊಲೀಸ್ ಭದ್ರತೆ ನೀಡಲಾಗಿದೆ.