ಕಾರವಾರ: ರಸ್ತೆ ದಾಟುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಚಿರತೆಯೊಂದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅಂಕೋಲಾ ತಾಲೂಕಿನ ಮಾಸ್ತಿಕಟ್ಟಾದ ಬಳಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ನಡೆದಿದೆ.
ಮಾಸ್ತಿಕಟ್ಟಾ ವ್ಯಾಪ್ತಿಯಲ್ಲಿ ದಟ್ಟ ಅರಣ್ಯ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಚಿರತೆ ಸೇರಿದಂತೆ ಕಾಡು ಪ್ರಾಣಿಗಳ ಓಡಾಟ ಸಾಮಾನ್ಯವಾಗಿದೆ. ಅದರಂತೆ ಮಾಸ್ತಿಕಟ್ಟಾದ ದೇವಸ್ಥಾನದ ಬಳಿ ಶುಕ್ರವಾರ ರಾತ್ರಿ ವೇಳೆ ಚಿರತೆಯೊಂದು ಹೆದ್ದಾರಿಯ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟಲು ಪ್ರಯತ್ನಿಸಿದ್ದು, ಈ ವೇಳೆ ಹೆದ್ದಾರಿಯಲ್ಲಿ ವೇಗವಾಗಿ ಬಂದ ಅಪರಿಚಿತ ವಾಹನವೊಂದು ಚಿರತೆಗೆ ಗುದ್ದಿದೆ. ಅಪಘಾತದಿಂದಾಗಿ ಚಿರತೆಯ ಸೊಂಟದ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದು, ಅದು ಸ್ಥಳದಲ್ಲೇ ಮೃತಪಟ್ಟಿದೆ.