ಭಟ್ಕಳ: ನಮ್ಮ ತಾಲೂಕಿನ ಜನತೆಗೆ ಜಿಲ್ಲಾಸ್ಪತ್ರೆಯ ಉಪಯೋಗವಿಲ್ಲವಾದರೆ ಅದರ ಸಂಪೂರ್ಣ ವ್ಯವಸ್ಥೆ ನಮಗೆ ಕೊಡಿ. ನಾವು ನಮ್ಮ ಪಕ್ಕದ ಜಿಲ್ಲೆಯವರಿಗೂ ಕೂಡ ಆಶ್ರಯ ಕೊಡುತ್ತೇವೆ ಎಂದು ಶಾಸಕ ಸುನೀಲ್ ನಾಯ್ಕ ಕಾರವಾರದ ರಾಜಕೀಯ ಮುಖಂಡರಿಗೆ ತಿರುಗೇಟು ನೀಡಿದ್ದಾರೆ.
ಕಾರ್ಮಿಕ ಇಲಾಖೆಯಿಂದ ಪತ್ರಿಕಾ ವಿತರಕರಿಗೆ ಬಂದಂತಹ ದಿನಸಿ ಕಿಟ್ ವಿತರಿಸುವ ಸಂದರ್ಭದಲ್ಲಿ ಮಾತನಾಡಿದ ಅವರು, ತಾಲೂಕಿನ ಕೋವಿಡ್-19 ಸೋಂಕಿತರಿಗೆ ತಾಲೂಕಿನಲ್ಲಿ ಚಿಕಿತ್ಸೆಗೆ ಯಾವುದೇ ವ್ಯವಸ್ಥೆ ಇಲ್ಲವಾದ ಹಿನ್ನೆಲೆಯಲ್ಲಿ ಕಾರವಾರದ ಮೆಡಿಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಜಿಲ್ಲಾಡಳಿತ ಉತ್ತಮ ವ್ಯವಸ್ಥೆ ಮಾಡಿದೆ. ತಾಲೂಕಿನ ಎಲ್ಲಾ ಸೋಂಕಿತರನ್ನು ಚಿಕಿತ್ಸೆಗಾಗಿ ಕಾರವಾರಕ್ಕೆ ವರ್ಗಾವಣೆ ಮಾಡಲಾಗಿದೆ ಎಂದರು.