ಕಾರವಾರ : ನೆರೆ ರಾಜ್ಯ ಮಹಾರಾಷ್ಟ್ರದ ಕೊರೊನಾ ನಂಜು ಇದೀಗ ಉತ್ತರಕನ್ನಡ ಜಿಲ್ಲೆಯನ್ನು ಬಿಟ್ಟು ಬಿಡದೇ ಕಾಡತೊಡಗಿದೆ. ಒಂದು ಹಂತದಲ್ಲಿ ಜಿಲ್ಲೆಯ ಭಟ್ಕಳಕ್ಕೆ ಮಾತ್ರ ಸೀಮಿತವಾಗಿದ್ದ ಸೋಂಕು ಇದೀಗ ವಲಸಿಗರಿಂದಾಗಿ ಜಿಲ್ಲೆಯ ಇತರ ತಾಲೂಕುಗಳಲ್ಲಿಯೂ ಕಾಣಿಸಿ ಕೊಳ್ಳತೊಡಗಿದ್ದು, ಜಿಲ್ಲೆಯ ಜನರ ಆತಂಕ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ.
ಕಳೆದೊಂದು ವಾರದ ಅವಧಿಯಲ್ಲಿ ಬರೋಬ್ಬರಿ 14 ಪಾಸಿಟಿವ್ ಕೇಸ್‌ಗಳು ದಾಖಲಾಗಿವೆ, ಇವೆಲ್ಲವೂ ಕೂಡಾ ಹೊರ ರಾಜ್ಯದಿಂದ ವಾಪಸ್ ಆದವರೇ ಆಗಿದ್ದಾರೆ. ಕೆಲವೇ ದಿನಗಳ ಹಿಂದೆ ಎಲ್ಲ 11 ಸೋಂಕಿತರೂ ಗುಣಮುಖರಾಗುವ ಮೂಲಕ ಕೊರೊನಾ ಮುಕ್ತವಾಗಿದ್ದ ಉತ್ತರಕನ್ನಡ ಜಿಲ್ಲೆಯಲ್ಲಿ ಇದೀಗ ಕೊರೊನಾ ಪ್ರಕರಣಗಳ ಸಂಖ್ಯೆ 56 ಕ್ಕೆ ಏರಿಕೆಯಾಗಿ ಜಿಲ್ಲೆಯ ಜನರ ನಿದ್ದೆಗೆಡಿಸಿದೆ.
ಮೇ 13 ರಿಂದ ಇವತ್ತಿನವರೆಗೆ ಜಿಲ್ಲೆಯ ಕುಮಟಾ, ಹೊನ್ನಾವರ ಮುಂಡಗೋಡ, ಯಲ್ಲಾಪುರ, ದಾಂಡೇಲಿ ಹಾಗೂ ಜೋಯಿಡಾ ತಾಲೂಕಿನಲ್ಲೂ ಇದೀಗ ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ಈಗಾಗಲೇ ರೆಡ್ ಝೋನ್ ಎಂದು ಗುರುತಿಸಿಕೊಂಡಿದ್ದ ಮಹಾರಾಷ್ಟ್ರ ದಿಂದ ಆಗಮಿಸಿದ 12 ಮಂದಿ ಹಾಗೂ ತಮಿಳುನಾಡು ಮತ್ತು ಗುಜರಾತ್ ರಾಜ್ಯದ ತಲಾ ಒಬ್ಬರಲ್ಲಿ ಸೋಂಕು ಕಂಡುಬಂದಿದ್ದು ವಲಸಿಗರದ್ದೇ ಇದೀಗ ದೊಡ್ಡ ತಲೆನೋವಾಗಿದೆ.
ಅದೃಷ್ಟವಶಾತ್ ಅಧಿಕಾರಿಗಳ ಮುಂಜಾಗೃತಾ ಕ್ರಮದಿಂದಾಗಿ ಹೊರರಾಜ್ಯದಿಂದ ಬಂದ ಬಹುತೇಕ ಸೋಂಕಿತರನ್ನು ಕ್ವಾರಂಟೈನ್ ಕೇಂದ್ರದಲ್ಲೇ ಇರಿಸಿದ್ದರಿಂದ ಇತರರಿಗೆ ಸೋಂಕು ಹರಡುವುದನ್ನ ತಪ್ಪಿಸಿದಂತಾಗಿದೆ. ಆದರೆ, ಕೆಲವರು ಕಣ್ಣು ತಪ್ಪಿಸಿ ಈಗಾಗಲೇ ಸಮುದಾಯದೊಟ್ಟಿಗೆ ಸೇರಿಕೊಂಡಿರುವ ಅನುಮಾನಗಳಿದ್ದು, ಎಲ್ಲಿ ಸೋಂಕು ಪತ್ತೆಯಾಗುವುದೋ ಎನ್ನುವ ಆತಂಕ ಜನರನ್ನು ಕಾಡತೊಡಗಿದೆ.