ಕಾರವಾರ:ಉತ್ತರಕನ್ನಡ ಜಿಲ್ಲೆಯಲ್ಲಿ ಈ ವರ್ಷದ ಮಳೆಗಾಲವೂ ಪ್ರವಾಹ ಪರಿಸ್ಥಿತಿ ತಂದೊಡ್ಡಿದೆ. ಇತ್ತ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದ ತಪ್ಪಲು ಪ್ರದೇಶದ ಡಬ್ಗುಳಿ ಗ್ರಾಮ ಗುಡ್ಡಕುಸಿತದಿಂದ ನಲುಗಿ ಹೋಗಿದ್ದು, ಗ್ರಾಮಸ್ಥರು ನೆರವಿಗಾಗಿ ಕಾಯುತ್ತಿದ್ದಾರೆ.
ಕಳೆದ ಮಳೆಗಾಲದಲ್ಲಿ ಡಬ್ಗುಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಪಕ್ಕದ ಗುಡ್ಡ ಕುಸಿದು ಅಡಕೆ ತೋಟಕ್ಕೆ ಹಾನಿಯಾಗಿತ್ತು. ಈ ವರ್ಷದ ಗುಡ್ಡಕುಸಿತದಿಂದ ಅರ್ಧ ಕಿಲೋ ಮೀಟರ್ಗಟ್ಟಲೇ ತೋಟ ನಾಶವಾಗಿದೆ. ಜೊತೆಗೆ ಗ್ರಾಮದಿಂದ ಹೊರಹೋಗಲು ದಾರಿಯೇ ಇಲ್ಲದೇ ಜನರು ಆತಂಕ್ಕೊಳಗಾಗಿದ್ದಾರೆ. ಭಾನುವಾರ ಬೆಳಗ್ಗೆ ಡಬ್ಗುಳಿಯ ಇಬ್ಬರು ಯುವಕರು 6-7 ಕಿ.ಮೀ ಬೆಟ್ಟ-ಗುಡ್ಡಗಳನ್ನು ದಾಟಿ ಹೋಗಿ ಯಲ್ಲಾಪುರ ಪಟ್ಟಣವನ್ನು ಸೇರಿಕೊಂಡಿದ್ದು, ತಮ್ಮ ಊರಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ.