ಕಾರವಾರ: ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಗಡಿ ಭದ್ರತೆಯಲ್ಲೇ ಜೀವನ ಕಳೆಯುವವರು ಯೋಧರು. ಸೇವೆಯಿಂದ ನಿವೃತ್ತರಾದ ಬಳಿಕವಾದರೂ ಸ್ವಂತ ಮನೆಯಲ್ಲಿ ನೆಮ್ಮದಿಯ ಜೀವನ ಸಾಗಿಸಬೇಕು ಎನ್ನುವುದು ಹಲವು ಯೋಧರ ಕನಸು.
ಆದರೆ, ಕರಾವಳಿ ಜಿಲ್ಲೆ ಉತ್ತರ ಕನ್ನಡದ ನಿವೃತ್ತ ಯೋಧರಿಗೆ ಮಾತ್ರ ಅವರ ಕನಸು ಕನಸಾಗಿಯೇ ಉಳಿಯುವಂತಾಗಿದೆ. ಜಿಲ್ಲೆಯ ಸುಮಾರು 50ಕ್ಕೂ ಅಧಿಕ ಮಂದಿಗೆ ಇದುವರೆಗೂ ಜಿಲ್ಲಾಡಳಿತದಿಂದ ಭೂಮಿಯೇ ಮಂಜೂರಾಗಿಲ್ಲ.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಯೋಧರಿಗೆ ದೇಶದಲ್ಲಿ ಇರುವ ಗೌರವವೇ ಬೇರೆ. ತಮ್ಮ ಕಿರಿವಯಸ್ಸಿನಲ್ಲೇ ಸೇನೆಗೆ ಸೇರಿ ಸುಮಾರು 20 ರಿಂದ 30 ವರ್ಷಗಳ ಕಾಲ ಕುಟುಂಬದಿಂದ ದೂರವಿದ್ದು, ದೇಶಸೇವೆಯಲ್ಲಿ ತೊಡಗಿಕೊಳ್ಳುತ್ತಾರೆ.
ಕಷ್ಟದ ದಿನಗಳನ್ನ ಎದುರಿಸುವ ಅವರು ನಿವೃತ್ತಿಯಾದ ಬಳಿಕವಾದರೂ ನೆಮ್ಮದಿಯ ಜೀವನವನ್ನ ನಡೆಸಬೇಕು ಎನ್ನುವ ಕನಸು ಕಂಡಿರುತ್ತಾರೆ. ಪುಟ್ಟದಾದ ಮನೆ ಕಟ್ಟಿಕೊಂಡು, ಹೆಂಡತಿ, ಮಕ್ಕಳೊಂದಿಗೆ ಇರುವ ಅಲ್ಪ ಜೀವನವನ್ನ ಖುಷಿಯಿಂದ ಕಳೆಯೋಣ ಎಂದುಕೊಳ್ಳುತ್ತಾರೆ. ಆದರೆ ಉತ್ತರ ಕನ್ನಡದ ನಿವೃತ್ತ ಸೈನಿಕರ ಪಾಲಿಗೆ ಮಾತ್ರ ಇದು ಸಾಧ್ಯವಿಲ್ಲದ ಮಾತು ಎನ್ನುವಂತಾಗಿದೆ.
ನಿವೃತ್ತ ಯೋಧರಿಗೆ ಮಂಜೂರಾಗದ ಭೂಮಿ ಯಾಕಂದ್ರೆ ಮನೆ ಕಟ್ಟಿಕೊಳ್ಳಲು ಸರ್ಕಾರ ಜಾಗವನ್ನೇ ಮಂಜೂರು ಮಾಡುತ್ತಿಲ್ಲ. ಇದಕ್ಕೆ ಉದಾಹರಣೆ ಕಾರವಾರ ತಾಲೂಕಿನ ಕೆರವಡಿ ಗ್ರಾಮದ ನಿವೃತ್ತ ಸೈನಿಕ ರಮೇಶ ನಾಯ್ಕ. ಇವರು 17 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಯ ನಂತರವೂ ಜೀವನಕ್ಕಾಗಿ ಬ್ಯಾಂಕ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದರು. ಕೆರವಡಿ ಗ್ರಾಮದ ಅತಿಕ್ರಮಣ ಜಮೀನಿನಲ್ಲಿ ಮನೆಯೊಂದನ್ನ ಕಟ್ಟಿಕೊಂಡು ಸದ್ಯ ಜೀವನ ಸಾಗಿಸುತ್ತಿದ್ದು, ಅದೂ ಸಹ ಪ್ರತಿ ಮಳೆಗಾಲದಲ್ಲಿ ನೀರಿನಲ್ಲಿ ಮುಳುಗಿರುತ್ತದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಇಂದಿನಿಂದ ಸೆಕ್ಷನ್ 144 ಜಾರಿ.. ನಿಯಮ ಉಲ್ಲಂಘಿಸಿದರೆ ಪೊಲೀಸರಿಂದ ಕಠಿಣ ಕ್ರಮ
ಹೀಗಾಗಿ ನಿವೃತ್ತಿಯ ಬಳಿಕ ತಮಗೆ ಮನೆ ಕಟ್ಟಿಕೊಳ್ಳಲು 4 - 5 ಗುಂಟೆ ಜಾಗ ಒದಗಿಸಿಕೊಡುವಂತೆ ಜಿಲ್ಲಾಡಳಿತದಿಂದ ಹಿಡಿದು ಪ್ರಧಾನಿ ಕಚೇರಿಯವರೆಗೂ ಪತ್ರವನ್ನ ಬರೆದಿದ್ದಾರೆ. ಪ್ರಧಾನಿ ಕಚೇರಿಯಿಂದ ಜಾಗ ಮಂಜೂರಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ.
ಆದರೆ, ಇದುವರೆಗೂ ಸಹ ಯಾವುದೇ ಜಾಗ ಮಂಜೂರಾಗಿಲ್ಲ. ಕಚೇರಿಯಿಂದ ಕಚೇರಿಗೆ ನಿತ್ಯ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ರಮೇಶ್ ಅವರು ಇರುವ ಜಾಗ ಅರಣ್ಯ ಇಲಾಖೆಯ ಅತಿಕ್ರಮಣ ಪ್ರದೇಶವಾಗಿದ್ದು, ಅಲ್ಲಿ ಮನೆ ಕಟ್ಟಲು ಅಧಿಕಾರಿಗಳು ಬಿಡುತ್ತಿಲ್ಲ. ಹೀಗಾಗಿ ಸರ್ಕಾರ ಆದಷ್ಟು ಬೇಗ ಬೇರೆ ಜಾಗವನ್ನಾದರೂ ನೀಡಿದಲ್ಲಿ ಸ್ವಂತ ಮನೆಯನ್ನ ಕಟ್ಟಿಕೊಳ್ಳುತ್ತೇನೆ ಅನ್ನೋದು ನಿವೃತ್ತ ರಮೇಶ್ರ ಅಭಿಪ್ರಾಯ.
ಇನ್ನು ಈ ಬಗ್ಗೆ ಜಿಲ್ಲಾಧಿಕಾರಿಗಳನ್ನ ಕೇಳಿದ್ರೆ, ನಮ್ಮಲ್ಲಿ ಶೇ.83ರಷ್ಟು ಅರಣ್ಯ ಪ್ರದೇಶವಿದ್ದು, ಸರ್ಕಾರಿ ಜಾಗದ ಕೊರತೆಯಿಂದಾಗಿ ಜಾಗ ಮಂಜೂರು ಮಾಡಲು ತೊಡಕಾಗಿದೆ. ಜಿಲ್ಲೆಯಲ್ಲಿ ಕಳೆದ ಹತ್ತಕ್ಕೂ ಅಧಿಕ ವರ್ಷಗಳಿಂದ ಜಾಗ ಮಂಜೂರಾಗದೇ ಇರುವ 50ಕ್ಕೂ ಅಧಿಕ ನಿವೃತ್ತ ಯೋಧರಿದ್ದಾರೆ.
ಹುತಾತ್ಮ ಸೈನಿಕರ ಕುಟುಂಬಕ್ಕೆ ಆದ್ಯತೆಯ ಮೇರೆಗೆ ಜಾಗದ ಬದಲು ಹಣವನ್ನ ನೀಡಲು ಅವಕಾಶವಿದ್ದು, ಈ ಪೈಕಿ ಓರ್ವರಿಗೆ ಮಾತ್ರ ಜಾಗ ಮಂಜೂರಾಗಿದೆ. ಉಳಿದ ನಾಲ್ವರಿಗೆ ಹಣ ನೀಡಿದ್ದು ಮೂವರಿಗೆ ಭೂಮಿ ನೀಡಲು ಜಾಗವೇ ಇಲ್ಲದಂತಾಗಿದೆ ಅಂತಾರೆ.
ಒಟ್ಟಾರೇ ದೇಶಕ್ಕಾಗಿ ಪ್ರಾಣವನ್ನೇ ಒತ್ತೆಯಿಟ್ಟು ದುಡಿಯುವ ಸೈನಿಕರಿಗೆ ನಿವೃತ್ತಿ ಬಳಿಕ ಮನೆ ನಿರ್ಮಾಣಕ್ಕೆ ನೀಡಲು ಜಾಗವೇ ಇಲ್ಲದಂತಾಗಿರೋದು ನಿಜಕ್ಕೂ ದುರಂತ. ಈ ಬಗ್ಗೆ ಸರ್ಕಾರ ಗಮನಹರಿಸಿ ನಿವೃತ್ತ ಯೋಧರ ಸಮಸ್ಯೆಗೆ ಆದಷ್ಟು ಶೀಘ್ರದಲ್ಲಿ ಪರಿಹಾರವನ್ನ ಒದಗಿಸಿಕೊಡಬೇಕಿದೆ.