ಕಾರವಾರ(ಉತ್ತರ ಕನ್ನಡ):ಬುಡಕಟ್ಟು ಜನಾಂಗಕ್ಕೆ ಸೇರಿದ ಕುಣಬಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕಳೆದ ಎರಡು ಮೂರು ದಶಕಗಳಿಂದ ಬೇಡಿಕೆ ಕೇಳಿಬರುತ್ತಿದೆ. ಆದರೆ ಇದುವರೆಗೂ ಯಾವುದೇ ಸರ್ಕಾರಗಳೂ ಕುಣಬಿ ಸಮುದಾಯದವರ ಬೇಡಿಕೆಗೆ ಮನ್ನಣೆ ನೀಡಿರಲಿಲ್ಲ. ಇದೀಗ ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ಹಾಕಲು ಕುಣಬಿ ಸಮುದಾಯ ನಿರ್ಧರಿಸಿದ್ದು, ತಮ್ಮ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲೇಬೇಕೆಂದು ಭಾರಿ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಸದ್ಯ ಸರ್ಕಾರಕ್ಕೆ 15 ದಿನಗಳ ಗಡುವು ನೀಡುವ ಮೂಲಕ ಮುಂದಿನ ಪರಿಣಾಮಗಳನ್ನು ಎದುರಿಸುವಂತೆ ಎಚ್ಚರಿಕೆ ರವಾನಿಸಲಾಗಿದೆ. ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ.
ಹೌದು, ಉತ್ತರಕನ್ನಡ ಜಿಲ್ಲೆಯಲ್ಲಿ ಹಾಲಕ್ಕಿ, ಕುಣಬಿ, ಗೌಳಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆನ್ನುವುದು ಎರಡು- ಮೂರು ದಶಕಗಳಿಂದ ಕೇಳಿ ಬರುತ್ತಿರುವ ಕೂಗು. ಅದರಲ್ಲೂ ಕುಣಬಿ ಸಮಾಜ ತಮ್ಮನ್ನು 2ಎ ಪ್ರವರ್ಗದಿಂದ ತೆಗೆದು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸಾಕಷ್ಟು ಸಮಯಗಳಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮುಂದೆ ತಮ್ಮ ಮನವಿಗಳನ್ನು ಸಲ್ಲಿಸಿಕೊಂಡು ಬರುತ್ತಿದ್ದಾರೆ.
ಜಿಲ್ಲೆಯ ಜನಪ್ರತಿನಿಧಿಗಳು ಸೇರಿದಂತೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಬಳಿಯೂ ತಮ್ಮ ಬೇಡಿಕೆಯನ್ನು ಸಲ್ಲಿಸಿ ಕೇಂದ್ರ ಸರ್ಕಾರದ ಗಮನ ಸೆಳೆಯಲು ಆಗ್ರಹಿಸಿತ್ತು. ಆದರೆ, ದಶಕಗಳಿಂದಲೂ ಸಮುದಾಯಕ್ಕೆ ಆಶ್ವಾಸನೆ ದೊರೆಯುತ್ತಿದೆಯೇ ಹೊರತು, ಈ ಕುರಿತು ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ. ಇವರ ನಂತರದಲ್ಲಿ ಮನವಿ ನೀಡಿದ ಬೆಟ್ಟ ಕುರುಬ ಸೇರಿದಂತೆ ಇತರೆ ಸಮುದಾಯಗಳನ್ನ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸರ್ಕಾರ ಅನುಮೋದನೆ ನೀಡಿದ್ದು, ಅರ್ಹ ಪಟ್ಟಿಯಲ್ಲಿ ಬರುವ ಕುಣಬಿ ಸಮುದಾಯವನ್ನು ಮಾತ್ರ ಇದುವರೆಗೂ ಕಡೆಗಣಿಸಲಾಗಿದೆ.
ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ: ಈ ಹಿನ್ನೆಲೆ ಇದೀಗ ಕುಣಬಿ ಸಮುದಾಯದವರು ಹೋರಾಟದ ಮೂಲಕ ಗಮನ ಸೆಳೆಯಲು ಮುಂದಾಗಿದ್ದಾರೆ. ಅಲ್ಲದೇ ರಾಜ್ಯ ಸರ್ಕಾರಕ್ಕೆ 15 ದಿನಗಳ ಗಡುವು ನೀಡಿರುವ ಕುಣಬಿ ಮುಖಂಡರು, ಬೇಡಿಕೆ ಈಡೇರಿಸದಿದ್ದಲ್ಲಿ ಜಿಲ್ಲಾ ಕೇಂದ್ರದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.