ಕಾರವಾರ:ಕುಮಟಾ ಪಟ್ಟಣದ ವಿದ್ಯಾಧೀರಾಜ ಪಾಲಿಟೆಕ್ನಿಕ್ ಕಾಲೇಜಿನ ಬಳಿ ಪತ್ತೆಯಾಗಿದ್ದ ಬಾಂಬ್ ಮಾದರಿಯ ವಸ್ತುವನ್ನು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ನಿಷ್ಕ್ರಿಯಗೊಳಿಸಿ ಜನರ ಆತಂಕವನ್ನು ದೂರ ಮಾಡಿದ್ದಾರೆ. ಇತ್ತ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ನಕಲಿ ಬಾಂಬ್ ಪತ್ತೆಯಾದ ಪ್ರಕರಣ ತನಿಖೆ ಆರಂಭಿಸಿದ ಪೊಲೀಸ್ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದಲ್ಲಿ ಬಾಂಬ್ ಮಾದರಿಯ ವಸ್ತು ಪತ್ತೆಯಾದ ಘಟನೆ ಜಿಲ್ಲೆಯ ಜನತೆ ಬೆಚ್ಚಿ ಬೀಳಿಸುವಂತೆ ಮಾಡಿತ್ತು. ಪಟ್ಟಣದ ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜಿನ ಹಿಂಬದಿಯ ಅರಣ್ಯ ಪ್ರದೇಶದಲ್ಲಿ ಎಲ್ಇಡಿ ಬಾಂಬ್ ಮಾದರಿ ಹೋಲುವ ವಸ್ತು ಬುಧವಾರ ಪತ್ತೆಯಾಗಿತ್ತು. ಇದನ್ನು ಗಮನಿಸಿದ್ದವರು ತಕ್ಷಣ ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ದರು.
ವಸ್ತು ಸಿಕ್ಕ ಸಮೀಪದಲ್ಲೇ ಕುಮಟಾ ರೈಲ್ವೆ ನಿಲ್ದಾಣ ಇರುವ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದರು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಜನರ ಓಡಾಟಕ್ಕೆ ನಿರ್ಬಂಧ ಹಾಕಿತ್ತು. ಬಳಿಕ ಮಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಬಾಂಬ್ ಅಲ್ಲ ಎಂದು ಖಚಿತ ಪಡಿಸಿತ್ತು. ಈ ವೇಳೆ, ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ.
ಬಾಂಬ್ ಮಾದರಿಯ ವಸ್ತು ಸಿಕ್ಕ ಸಮೀಪದಲ್ಲಿ ಪಾಲಿಟೆಕ್ನಿಕ್ ಕಾಲೇಜಿದ್ದು, ಅಲ್ಲಿನ ವಿದ್ಯಾರ್ಥಿಗಳೇ ಈ ಕೃತ್ಯ ಮಾಡಿದ್ದಾರಾ ಎಂಬ ಸಂಶಯವನ್ನು ಕುಮಟಾ ಪೊಲೀಸರು ವ್ಯಕ್ತಪಡಿಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕುಮಟಾದಲ್ಲಿ ಆತಂಕ ಸೃಷ್ಟಿಸಿದ ಬಾಂಬ್ ಮಾದರಿಯ ವಸ್ತು