ಕಾರವಾರ (ಉತ್ತರ ಕನ್ನಡ) :ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಎರಡು ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ತೀವ್ರ ಗೊಂದಲಕ್ಕೆ ಕಾರಣವಾಗಿರುವ ಕುಮಟಾ ಕ್ಷೇತ್ರದಲ್ಲಿ ಅಭ್ಯರ್ಥಿ ಘೋಷಣೆ ಬಾಕಿ ಉಳಿಸಿಕೊಂಡಿದೆ. ಪಟ್ಟಿಯಲ್ಲಿ ಜಿಲ್ಲೆಯ ಶಿರಸಿ-ಸಿದ್ದಾಪುರ ಕ್ಷೇತ್ರಕ್ಕೆ ಭೀಮಣ್ಣ ನಾಯ್ಕ ಅವರನ್ನು ಹಾಗೂ ಯಲ್ಲಾಪುರ-ಮುಂಡಗೋಡ ಕ್ಷೇತ್ರಕ್ಕೆ ವಿ.ಎಸ್.ಪಾಟೀಲ್ ಅವರ ಹೆಸರನ್ನು ಘೋಷಣೆ ಮಾಡಿದೆ. ಆದರೆ ಈ ಘೋಷಣೆಯಿಂದ ಯಾವುದೇ ವಿರೋಧಗಳು ವ್ಯಕ್ತವಾಗಿಲ್ಲ.
ತೀವ್ರ ಗೊಂದಲದಲ್ಲಿ ಕುಮಟಾ-ಹೊನ್ನಾವರ ಕ್ಷೇತ್ರ : ಅತಿ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿ ತೀವ್ರ ಗೊಂದಲಕ್ಕೆ ಕಾರಣವಾಗಿರುವ ಕುಮಟಾ-ಹೊನ್ನಾವರ ಕ್ಷೇತ್ರದ ಅಭ್ಯರ್ಥಿ ಘೋಷಣೆಯನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಕ್ಷೇತ್ರದಲ್ಲಿ ಅರ್ಜಿ ಸಲ್ಲಿಸಿದವರ ಪೈಕಿ ಮಾಜಿ ಶಾಸಕಿ ಶಾರದಾ ಶೆಟ್ಟಿ, ಮಂಜುನಾಥ ನಾಯ್ಕ ಹಾಗೂ ಶಿವಾನಂದ ಹೆಗಡೆ ಈ ಮೂವರ ಹೆಸರು ಅಂತಿಮ ಪಟ್ಟಿಗೆ ತೆರಳಿದೆ ಎನ್ನಲಾಗಿತ್ತು. ಆದರೆ ಇದರ ನಡುವೆ ಕಳೆದ ಕೆಲ ದಿನಗಳಿಂದ ಮಾಜಿ ಸಂಸದೆ ಮಾರ್ಗರೇಟ್ ಆಳ್ವಾ ಅವರ ಮಗ ನಿವೇದಿತ್ ಆಳ್ವ ಅವರಿಗೆ ಟಿಕೆಟ್ ನೀಡಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದರು.