ಕಾರವಾರ:ರಸ್ತೆ ಬದಿಯಲ್ಲಿ ಮಣ್ಣು ಅಗೆಯುತ್ತಿದ್ದಾಗ ಗುಹೆಯೊಂದು ಕುಮಟಾ ತಾಲೂಕು ಮೂರೂರು ಮುಸ್ಗುಪ್ಪೆಯಲ್ಲಿ ಪತ್ತೆಯಾಗಿದೆ. ಇದು ಸ್ಥಳೀಯರಲ್ಲಿ ಕುತೂಹಲ ಹೆಚ್ಚಿಸಿದೆ. ಮೂರೂರು ಗ್ರಾ.ಪಂ ವ್ಯಾಪ್ತಿಯ ಮುಸ್ಗುಪ್ಪೆಯ ರಸ್ತೆ ಬದಿಯಲ್ಲಿ ಮಣ್ಣು ಅಗೆಯುತ್ತಿರುವಾಗ ಗುಹೆ ಕಂಡುಬಂದಿದೆ. ಮೊದಮೊದಲು ಭೂಮಿಯ ಪೊಳ್ಳು ಪದರವಿರುವ ಜಾಗವಿರಬಹುದೆಂದು ಅಗೆಯುತ್ತಾ ಹೋದಂತೆ ಗುಹೆಯ ಆಳ ಜಾಸ್ತಿಯಾಗುತ್ತಾ ಹೋಗಿದೆ.
ಸುಮಾರು 8 ಅಡಿ ಆಳದಲ್ಲಿ ಗುಹೆ ಪತ್ತೆಯಾಗಿದೆ. ಆದರೆ ಇನ್ನೂ ಯಾವುದೇ ಕುರುಹುಗಳು ಸಿಕ್ಕಿಲ್ಲ. ಈ ಗುಹೆಯಿಂದ ಮಿರ್ಜಾನ್ ಕೋಟೆಗೆ ಸಂಪರ್ಕ ಇರಬಹುದೆಂದು ಸ್ಥಳೀಯರು ಊಹಿಸಿದ್ದಾರೆ. ಮಿರ್ಜಾನ್ ಕೋಟೆ ನಿರ್ಮಿಸಿದ ಆದಿಲ್ ಶಾಹಿಗಳ ಪಾಳೆಗಾರರು ಕೋಟೆಯ ಮೇಲೆ ಶತ್ರುಗಳ ದಾಳಿಯಾದರೆ ಪಾಳೆಗಾರರು ಸುಲಭವಾಗಿ ತಪ್ಪಿಸಿಕೊಳ್ಳಲು ಕೆಲ ಗುಪ್ತ ಸುರಂಗಗಳನ್ನು ಕೊರೆಯಿಸಿದ್ದರಂತೆ. ಈ ಗುಪ್ತ ದ್ವಾರಗಳು ಕೋಟೆಯ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿವೆ ಎಂದು ಹೇಳಲಾಗುತ್ತಿದೆ.