ಕರ್ನಾಟಕ

karnataka

ETV Bharat / state

ನೀರು ಬಂಡಿ ಉತ್ಸವ.. ಕೊಪ್ಪರಿಗೆ ಇಳಿಯುವುದರೊಂದಿಗೆ ಕುಕ್ಕೆ ಜಾತ್ರೆ ಸಂಪನ್ನ

ಮಹಾತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಸೋಮವಾರ ಕೊಪ್ಪರಿಗೆ ಇಳಿಸುವ ಕಾರ್ಯ ಸಂಭ್ರಮದಿಂದ ನಡೆಯಿತು. ಇದರೊಂದಿಗೆ ದೇವಸ್ಥಾನದ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.

Kukke Subramanya Temple fair Concluded
ಕುಕ್ಕೆ ಜಾತ್ರೆ ಸಮಾಪ್ತಿ..

By

Published : Dec 6, 2022, 9:22 AM IST

Updated : Dec 6, 2022, 9:33 AM IST

ಸುಬ್ರಹ್ಮಣ್ಯ(ದಕ್ಷಿಣ ಕನ್ನಡ):ವಿಶ್ವ ಪ್ರಸಿದ್ಧ ನಾಗಕ್ಷೇತ್ರ ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ಸೋಮವಾರ ಕೊಪ್ಪರಿಗೆ ಇಳಿಯುವುದರೊಂದಿಗೆ ಸಂಪನ್ನಗೊಂಡಿತು.

ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ವೈದಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಬಳಿಕ ಕೊಪ್ಪರಿಗೆಯನ್ನು ಪೂರ್ವ ಶಿಷ್ಠ ಸಂಪ್ರದಾಯದಂತೆ ಇಳಿಸಲಾಯಿತು. ಸಂಜೆ ನೀರು ಬಂಡಿ ಉತ್ಸವ ನಡೆಯಿತು. ಎಲ್ಲಾ ದೇವಾಲಯಗಳಲ್ಲಿ ಕೊಡಿ(ಧ್ವಜ) ಏರಿ ಜಾತ್ರೆ ಆರಂಭವಾದರೆ ಕುಕ್ಕೆ ಕ್ಷೇತ್ರದಲ್ಲಿ ಕೊಪ್ಪರಿಗೆ ಏರುವುದರ ಮೂಲಕ ಇಲ್ಲಿನ ಜಾತ್ರೆ ಆರಂಭವಾಗುತ್ತದೆ. ಅದೇ ರೀತಿ ಕೊಪ್ಪರಿಗೆ ಇಳಿಯುವುದರೊಂದಿಗೆ ಜಾತ್ರೆ ಸಮಾಪ್ತಿಯಾಗುತ್ತದೆ.

ಕುಕ್ಕೆ ಜಾತ್ರೆ ಸಮಾಪ್ತಿ..

ಇದನ್ನೂ ಓದಿ:ಮಳೆಯ ನಡುವೆಯೂ ಕುಕ್ಕೆಯಲ್ಲಿ ಅದ್ಧೂರಿ ಪಂಚಮಿ ರಥೋತ್ಸವ

ನೀರು ಬಂಡಿ ಉತ್ಸವ:ಜಾತ್ರಾ ಉತ್ಸವದ ನಿಮಿತ್ತ ಕುಕ್ಕೆ ಶ್ರೀ ದೇವಳದ ಹೊರಾಂಗಣಕ್ಕೆ ಬೆಳಗಿನಿಂದ ನೀರನ್ನು ಬಿಟ್ಟು ಹೊರಾಂಗಣದ ಸುತ್ತಲೂ ತುಂಬಿಸಲಾಗುತ್ತದೆ. ರಾತ್ರಿ ಮಹಾಪೂಜೆಯ ಬಳಿಕ ದೀಪಾರಾಧನೆಯುಕ್ತ ಪಲ್ಲಕ್ಕಿ ಉತ್ಸವ ನೀರಿನಲ್ಲಿ ನೆರವೇರುತ್ತದೆ. ನಂತರ ನೀರಿನಲ್ಲಿ ಶ್ರೀ ದೇವರ ಶೇಷವಾಹನಯುಕ್ತ ಬಂಡಿ ರಥೋತ್ಸವ ನಡೆಯುತ್ತದೆ. ವರ್ಷದಲ್ಲಿ ಒಮ್ಮೆ ಮಾತ್ರ ನಡೆಯುವ ಈ ಉತ್ಸವವು ಬೇರೆ ಯಾವುದೇ ದೇವಳದಲ್ಲಿ ಕಾಣಸಿಗುವುದಿಲ್ಲ. ಈ ಉತ್ಸವದೊಂದಿಗೆ ಚಂಪಾಷಷ್ಠಿ ಉತ್ಸವ ಸಮಾಪ್ತಿಯಾಯಿತು. ಈ ವಿಶಿಷ್ಠ ಉತ್ಸವವನ್ನು ಸಹಸ್ರಾರು ಭಕ್ತರು ವೀಕ್ಷಿಸಿ ಕೃತಾರ್ಥರಾದರು.

ಕುಕ್ಕೆ ಜಾತ್ರೆ ಸಮಾಪ್ತಿ..

ಮಕ್ಕಳೊಂದಿಗೆ ನೀರಾಡಿದ ಯಶಸ್ವಿ:ಶ್ರೀ ದೇವಳದ ಆನೆ ಯಶಸ್ವಿ ಹೊರಾಂಗಣದಲ್ಲಿ ನೀರು ತುಂಬಿಸಿದುದರಿಂದ ಸಂತೋಷದಿಂದ ಸಂಭ್ರಮ ಪಟ್ಟಿತು. ನೀರಿನಲ್ಲಿ ಹೊರಳಾಡಿ ತನಗೆ ನೀರು ಹಾರಿಸಿದ ಪುಟಾಣಿ ಮಕ್ಕಳ ಮೇಲೆ ತನ್ನ ಕಾಲು ಹಾಗೂ ಸೊಂಡಿಲಿನಿಂದ ನೀರು ಎರಚಿ ತಾನು ಸಂಭ್ರಮ ಪಡುವುದರೊಂದಿಗೆ, ಭಕ್ತಾಧಿಗಳಿಗೂ ಹೆಚ್ಚಿನ ಸಂತಸವನ್ನು ನೀಡಿತು. ಮಕ್ಕಳು, ಹಿರಿಯರು ಕೂಡಾ ನೀರಾಟವಾಡಿ ಸಂಭ್ರಮಿಸಿದರು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯ ನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರು ಸೇರಿದಂತೆ ಸಿಬ್ಬಂದಿ, ಭಕ್ತರು ಉಪಸ್ಥಿತರಿದ್ದರು.

ಇದನ್ನೂ ಓದಿ:ಅಚ್ಚುಕಟ್ಟಾಗಿ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿ ಮೆಚ್ಚುಗೆ ಗಳಿಸಿದ ಮಹಿಳಾ ಪೊಲೀಸ್ ಅಧಿಕಾರಿ

Last Updated : Dec 6, 2022, 9:33 AM IST

ABOUT THE AUTHOR

...view details