ಕುಡ್ಲಗಿ ಬಿಜೆಪಿ ಶಾಸಕ ಎನ್.ವೈ.ಗೋಪಾಲಕೃಷ್ಣ ರಾಜೀನಾಮೆ ಶಿರಸಿ: ಬಳ್ಳಾರಿಯ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರು ತಮ್ಮ ಶಾಸಕ ಸ್ಥಾನಕ್ಕೆ ಶುಕ್ರವಾರ ಬೆಳಗ್ಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇದರಿಂದ ಚುನಾವಣೆ ಘೋಷಣೆಯ ನಂತರ ಮೊದಲ ವಿಕೆಟ್ ಪತನವಾದಂತಾಗಿದೆ. ಬಿಜೆಪಿ ಶಾಸಕರಾಗಿರುವ ಎನ್.ವೈ.ಗೋಪಾಲಕೃಷ್ಣ ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ ಎಂಬ ಗುಮಾನಿ ಹರಡಿತ್ತು.
ಶಿರಸಿಗೆ ಆಗಮಿಸಿದ ಗೋಪಾಲಕೃಷ್ಣ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು. ರಾಜೀನಾಮೆ ನಿರ್ಧಾರಕ್ಕೆ ವಯಸ್ಸು ಕಾರಣ ಎಂದು ತಿಳಿಸಿದ್ದಾರೆ. ಕೂಡ್ಲಿಗಿಯಿಂದ ನೇರವಾಗಿ ಶಿರಸಿಯ ಸಭಾಧ್ಯಕ್ಷರ ಕಚೇರಿಗೆ ಕಾಂಗ್ರೆಸ್ ಮುಖಂಡರೊಂದಿಗೆ ಆಗಮಿಸಿದ ಗೋಪಾಲಕೃಷ್ಣ 11.30 ಕ್ಕೆ ತಮ್ಮ ರಾಜೀನಾಮೆ ಪತ್ರ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನನಗೆ ವಯಸ್ಸಾಗಿದೆ. ನನ್ನ ವಯಸ್ಸು 72, ಈ ವಯಸ್ಸಿನಲ್ಲಿ ನಾನು ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ನಾಲ್ಕು ಬಾರಿ ಮೊಳಕಾಲ್ಮೂರು ಹಾಗೂ ನಂತರ ಬಳ್ಳಾರಿಗೆ ಹೋದೆ ಅಲ್ಲಿಯೂ ಶಾಸಕನಾದೆ. ಬಳಿಕ ಬಿಜೆಪಿಗೆ ಸೇರಿಕೊಂಡು ಕೂಡ್ಲಿಗಿಗೆ ಬಂದು ಶಾಸಕನಾದೆ. ಕುಡ್ಲಗಿಯಲ್ಲಿ ಐದು ವರ್ಷ ಶಾಸಕನಾಗಿ ಪೂರ್ಣಗೊಳಿಸಿದ್ದೇನೆ. ಅಲ್ಲಿನ ಜನರಿಗಾಗಿ ನನ್ನ ಬದ್ಧತೆ ಏನಿತ್ತು, ಹಾಗೂ ನಾನು ರಾಜಕೀಯಕ್ಕೆ ಬರುವ ಮೊದಲು ಏನಂದುಕೊಂಡಿದ್ದೆನೋ ಅದೆಲ್ಲವನ್ನು ಪೂರ್ತಿಗೊಳಿಸಿದ್ದೇನೆ." ಎಂದು ಹೇಳಿದರು.
"ಆರೋಗ್ಯದ ಸಮಸ್ಯೆಯೂ ಇರುವುದರಿಂದ ಭವಿಷ್ಯದಲ್ಲಿ ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದು ನನ್ನಿಂದ ಸಾಧ್ಯವಿಲ್ಲ. ಹಾಗಾಗಿ ರಾಜೀನಾಮೆ ನೀಡುವ ನಿರ್ಧಾರ ಮಾಡಿದೆ. ಅಡ್ಡಗೋಡೆ ಮೇಲೆ ದೀಪ ಇಟ್ಟ ಹಾಗೇ ಭಾವನೆಗಳು ಬೇಕಾಗಿಲ್ಲ. ಇರೋದಾದ್ರೆ ಇರೋಣ ಇಲ್ಲಂದ್ರೆ ಬಿಟ್ಟುಬಿಡೋಣ ಅಂತ ಈ ನಿರ್ಧಾರ ಕೈಗೊಂಡಿದ್ದೇನೆ. ಆ ಕಡೆ ಇದ್ದರೆ ಈ ಕಡೆಯವರು, ಈ ಕಡೆ ಇದ್ದರೆ ಆ ಕಡೆಯವರು ಎಳೀತಾರೆ. ಅದಕ್ಕೆ ಅವಕಾಶ ಕೊಡೋದೆ ಬೇಡ ಅಂತ ಈ ನಿರ್ಧಾರ." ಎಂದರು.
"ಬೇರೆ ಪಕ್ಷಕ್ಕೆ ಸೇರುವ ಕುರಿತು ಪಕ್ಷದವರು ಮಾತನಾಡುತ್ತಾರೆ, ಅದಕ್ಕೆ ನಾನೇನು ಹೇಳಲಾಗದು. ನಾನು ಯಾವುದೇ ಪಕ್ಷ ಸೇರ್ಪಡೆಯಾಗುತ್ತಿಲ್ಲ. ನಾನು ಸಂಪೂರ್ಣವಾಗಿ ರಾಜಕೀಯ ಜೀವನದಿಂದ ನಿವೃತ್ತಿ ಪಡೆಯುವ ದೃಷ್ಟಿ ಇಟ್ಟುಕೊಂಡು ರಾಜೀನಾಮೆ ನೀಡಿದ್ದೇನೆ. ಈಗ ಗೆದ್ದಿರುವ ವಿಧಾನಸಭಾ ಕ್ಷೇತ್ರ ಇರೋದು ಬಳ್ಳಾರಿ ಜಿಲ್ಲೆಯಲ್ಲಿ. ನನ್ನ ಜಿಲ್ಲೆ ಚಿತ್ರದುರ್ಗ, ನಾನು ನಾಲ್ಕು ಬಾರಿ ಶಾಸಕನಾದ ಮೊಳಕಾಲ್ಮೂರು ನನ್ನ ವಿಧಾನಸಭಾ ಕ್ಷೇತ್ರ. ಈಗಲೂ ನಾನು ಮತ್ತೆ ವಿಧಾನಸಭಾ ಚುನಾವಣೆಗೆ ನಿಂತರೆ ಗೆಲ್ಲುತ್ತೇನೆ. ಅದರಲ್ಲಿ ಎರಡು ಮಾತಿಲ್ಲ."
ಕ್ಷೇತ್ರದ ಜನರು ಬೇರೆಯವರಿಗೆ ಅವಕಾಶ ನೀಡಿ ಎಂದು ಹೇಳುತ್ತಿದ್ದಾರೆ. ಜೊತೆಗೆ ಮಕ್ಕಳು ಕೂಡ ನಮಗೆ ಅವಕಾಶ ನೀಡಿ ಎಂದು ಕೇಳುತ್ತಿದ್ದಾರೆ. ಅವರಿಗೂ ಅವಕಾಶ ಕೊಡುವ ಎಂದು ರಾಜೀನಾಮೆ ನೀಡಿದೆ. ಆದರೆ ಅವರು ಯಾವ ಪಕ್ಷಕ್ಕೆ ಹೋಗುತ್ತಾರೋ ನನಗೆ ಗೊತ್ತಿಲ್ಲ. ನಾನು 6 ಬಾರಿ ಶಾಸಕನಾದರೂ ಸಚಿವ ಸ್ಥಾನ ನೀಡಿಲ್ಲ. ಬಿಜೆಪಿ ಪಕ್ಷವೂ ನೀಡಿಲ್ಲ. ಕಾಂಗ್ರೆಸ್ ಸಹ ನೀಡಿಲ್ಲ. ಇದಕ್ಕೆ ಅಸಮಾಧಾನವಿದೆ. ಅಲ್ಲದೇ ನನಗೆ ವಯಸ್ಸಾದ ಕಾರಣ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದರು.
ಇದನ್ನೂ ಓದಿ:ಕೈತಪ್ಪಿದ ಟಿಕೆಟ್.. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ ಎಂ ಹಿರೇಮಠ್ ರಾಜೀನಾಮೆ, ಹಲವರಲ್ಲಿ ಅಸಮಾಧಾನ