ಕಾರವಾರ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಸೋಂಕಿತರನ್ನ ಪತ್ತೆ ಹಚ್ಚುವುದೇ ಕಷ್ಟವಾಗಿದೆ. ಆದರೆ, ಇದೀಗ ಮೆಡಿಕಲ್ ಕಾಲೇಜುಗಳಿರುವ ಜಿಲ್ಲೆಗಳಲ್ಲಿ ಪ್ರಯೋಗಾಲಯಗಳ ಸ್ಥಾಪನೆಗೆ ಸರ್ಕಾರ ಅನುಮತಿ ನೀಡಿದ್ದು, ಉತ್ತರಕನ್ನಡ ಜಿಲ್ಲೆಯಲ್ಲೂ ಸಹ ಕೋವಿಡ್ ಲ್ಯಾಬ್ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಟೆಸ್ಟ್ ಲ್ಯಾಬ್ ತಲೆ ಎತ್ತುತ್ತಿದೆ. ಕಾರವಾರ ನಗರದಲ್ಲಿರುವ ಮೆಡಿಕಲ್ ಕಾಲೇಜಿನಲ್ಲಿ ಈ ಪ್ರಯೋಗಾಲಯ ಸ್ಥಾಪನೆಯಾಗಲಿದ್ದು, ಜಿಲ್ಲಾಡಳಿತವೇ ಹೆಚ್ಚಿನ ಆಸಕ್ತಿ ವಹಿಸಿ ಲ್ಯಾಬ್ ನಿರ್ಮಿಸುತ್ತಿದೆ. ಕಾರ್ಟೇಜ್ ಬೇಸ್ಡ್ ನ್ಯೂಕ್ಲಿಕ್ ಆಸಿಡ್ ಆಂಪ್ಲಿಫಿಕೇಶನ್ ಟೆಸ್ಟ್ (CBNAAT) ಹಾಗೂ ಬಯೋ ಸೇಫ್ಟಿ ಲ್ಯಾಬ್ ಹೊಂದಿರುವ ಮೆಡಿಕಲ್ ಕಾಲೇಜುಗಳಲ್ಲಿ ಕೋವಿಡ್-19 ಪ್ರಯೋಗಾಲಯಗಳನ್ನ ಸ್ಥಾಪಿಸಲು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ ಮಾರ್ಗಸೂಚಿಗಳನ್ನ ನೀಡಿದೆ.
ಅದರಂತೆ ಕಾರವಾರದ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯಲ್ಲಿ ಈ ಪ್ರಯೋಗಾಲಯ ನಿರ್ಮಾಣವಾಗಲಿದ್ದು, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಎಂ.ರೋಷನ್ ಅದರ ಜವಾಬ್ದಾರಿಯನ್ನ ವಹಿಸಿಕೊಂಡಿದ್ದಾರೆ. ಈ ಕೋವಿಡ್-19 ಪ್ರಯೋಗಾಲಯ ಒಟ್ಟೂ ಆರು ವಿಭಾಗಗಳನ್ನ ಒಳಗೊಂಡಿರಲಿದ್ದು, ಪರೀಕ್ಷೆಗಾಗಿ ಸಂಗ್ರಹಗೊಂಡ ಮಾದರಿಗಳನ್ನ ಬಯೋ ಸೇಫ್ಟಿಯೊಂದಿಗೆ ಪರೀಕ್ಷೆ ಮಾಡಲು ವ್ಯವಸ್ಥೆ ಇರಲಿದೆ.
ಒಂದೇ ಬಾರಿಗೆ 96 ಮಾದರಿ ಪರೀಕ್ಷೆ ಸಾಮರ್ಥ್ಯ
ಪಿಪಿಇ ಕಿಟ್‌ಗಳನ್ನ ಧರಿಸಿಯೇ ಮಾದರಿಗಳ ಪರೀಕ್ಷೆಗಳನ್ನ ಕೈಗೊಳ್ಳಬೇಕಿದ್ದು ,ಇದಕ್ಕಾಗಿ ಲ್ಯಾಬ್‌ನಲ್ಲಿ ಎಲ್ಲ ಸೌಲಭ್ಯಗಳನ್ನ ವಹಿಸಲಾಗುತ್ತಿದೆ. ಕೋವಿಡ್-19 ಪರೀಕ್ಷೆ ಮಾಡುವ ಪಾಲಿಮರೈಸ್ಡ್ ಚೈನ್ ರಿಯಾಕ್ಷನ್ ಯಂತ್ರದಲ್ಲಿ ಒಂದೇ ಬಾರಿ 96 ಮಾದರಿಗಳನ್ನ ಪರೀಕ್ಷೆ ಮಾಡಬಹುದಾಗಿದ್ದು, ಎರಡು ಗಂಟೆಗಳಲ್ಲಿ ಪರೀಕ್ಷೆಯ ವರದಿ ಸಿಗಲಿದೆ. ಈ ಯಂತ್ರವು ದಿನಕ್ಕೆ 16 ತಾಸುಗಳವರೆಗೆ ನಿರಂತರವಾಗಿ ಕಾರ್ಯನಿರ್ವಹಿಸುವ ಕ್ಷಮತೆ ಹೊಂದಿರಲಿದ್ದು ಇದರನ್ವಯ ಒಂದು ದಿನಕ್ಕೆ 768 ಮಾದರಿಗಳನ್ನ ಪರೀಕ್ಷೆ ಮಾಡುವುದು ಸಾಧ್ಯವಾಗಲಿದೆ.