ಶಿರಸಿ:ಯಲ್ಲಾಪುರದ ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಅವರ ಬೆಂಬಲಿಗರು, ಕಾರ್ಯಕರ್ತರನ್ನು ಏಕಕಾಲಕ್ಕೆ ಬಿಜೆಪಿಗೆ ಸ್ವಾಗತಿಸುತ್ತೇವೆ ಮತ್ತು ಎಲ್ಲರನ್ನೂ ಒಂದುಗೂಡಿಸಿ ಚುನಾವಣೆ ಗೆಲ್ಲುತ್ತೇವೆ ಎಂದು ಮುಜುರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಹೆಬ್ಬಾರ್ ಅವರ ಕಾರ್ಯಕರ್ತರನ್ನು ಬಿಜೆಪಿಗೆ ಸ್ವಾಗತಿಸುವೆ: ಕೋಟಾ ಶ್ರೀನಿವಾಸ ಪೂಜಾರಿ - ಹೆಬ್ಬಾರ್ ಅವರನ್ನು ಪಕ್ಷ ಅಭ್ಯರ್ಥಿ ಎಂದು ಘೋಷಣೆ
ಯಲ್ಲಾಪುರದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಭಾಗಿ. ಹೆಬ್ಬಾರ್ ಗೆಲುವಿಗೆ ಶ್ರಮಿಸುತ್ತೇವೆ ಎಂದ ಸಚಿವರು.
ಯಲ್ಲಾಪುರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಸದ್ಯಕ್ಕೆ ಹೆಬ್ಬಾರ್ ಅವರ ಬೆಂಬಲಿಗರನ್ನು ಸೇರ್ಪಡೆ ಮಾಡಿಕೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಅವರಿಗೆ ಹುದ್ದೆ ನೀಡುವ ಕುರಿತು ಚರ್ಚೆ ಮಾಡುತ್ತೇವೆ. ಎಲ್ಲರೂ ಒಗ್ಗಟ್ಟಾಗಿ ಹೋಗುವ ತಿರ್ಮಾನ ತೆಗೆದುಕೊಂಡಾಗ ಅಲ್ಲಲ್ಲಿ ಬೇಡಿಕೆಗಳು, ಕೋರಿಕೆಗಳು, ಸ್ವರಗಳು, ಅಪಸ್ವರಗಳು ಸ್ವಾಭಾವಿಕವಾಗಿ ಬರುತ್ತದೆ. ಆದರೆ ಎಲ್ಲವನ್ನೂ ನಿಭಾಯಿಸುತ್ತೇವೆ. ಅವರೆಲ್ಲರನ್ನೂ ಪಕ್ಷಕ್ಕೆ ಕರೆದುಕೊಂಡು, ಸ್ಥಾನಮಾನದ ಕುರಿತು ನಂತರ ವಿಚಾರ ಮಾಡುತ್ತೇವೆ ಎಂದರು.
ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಇದ್ದಲ್ಲಿ ಅದನ್ನು ರಾಜ್ಯಾಧ್ಯಕ್ಷರು, ನಾವು ಎಲ್ಲರೂ ಸೇರಿ ಕುಳಿತು ಬಗೆಹರಿಸುತ್ತೇವೆ. ಹೆಬ್ಬಾರ್ ಅವರನ್ನು ಪಕ್ಷ ಅಭ್ಯರ್ಥಿ ಎಂದು ಘೋಷಿಸಿದೆ. ಅವರ ಗೆಲುವಿಗೆ ಶ್ರಮಿಸುತ್ತೇವೆ ಎಂದು ತಿಳಿಸಿದರು.