ಶಿರಸಿ(ಉತ್ತರ ಕನ್ನಡ): ರಾಜ್ಯದ ಮುರಾರ್ಜಿ ವಸತಿ ನಿಲಯ ಸೇರಿದಂತೆ ಬಡ ವಿದ್ಯಾರ್ಥಿಗಳು ಓದುವ ವಸತಿ ಶಾಲೆಗಳನ್ನು ಪಿಯುಸಿಯವರೆಗೂ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕಲ್ಲಿ ಮುರಾರ್ಜಿ ವಸತಿ ಶಾಲೆಗೆ ಬುಧವಾರ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಡವರು ಮತ್ತು ಪ್ರತಿಭಾವಂತ ಮಕ್ಕಳಿಗೆ ಮುರಾರ್ಜಿ ಶಾಲೆಗಳು ಉತ್ತಮ ವೇದಿಕೆ ಆಗಿವೆ. 6 ನೇ ತರಗತಿಯಿಂದ ಪಿಯು ಶಿಕ್ಷಣದವರೆಗೂ ಒಂದೇ ಸ್ಥಳದಲ್ಲಿ ವಿದ್ಯಾಭ್ಯಾಸ ದೊರೆಯುವಂತಾಗಬೇಕು ಎಂಬುದು ನಮ್ಮ ಆಶಯವಾಗಿದೆ. ಮುರಾರ್ಜಿ ಶಾಲೆಗಳನ್ನು ಪಿಯುವರೆಗೂ ವಿಸ್ತರಿಸುವ ಕುರಿತಂತೆ ಶಿಕ್ಷಣ ಇಲಾಖೆಯೊಂದಿಗೂ ಮಾತನಾಡಲಾಗಿದೆ ಎಂದರು.
ವಿದ್ಯಾರ್ಥಿನಿಯರಿಗೆ ಈಗಾಗಲೇ ಓಬವ್ವ ಆತ್ಮ ರಕ್ಷಣಾ ಕಲೆಯೊಂದಿಗೆ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಇದಕ್ಕೆ ವಿದ್ಯಾರ್ಥಿನಿಯರೂ ಸಹ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ವಸತಿ ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ವೇತನ ಕಡಿಮೆ ಇದೆ. ಪ್ರಾಮಾಣಿಕ ಸೇವೆಯಿಂದಾಗಿ ಶಾಲೆಗಳೂ ಉತ್ತಮ ಮಟ್ಟದಲ್ಲಿ ನಡೆಯುತ್ತಿವೆ. ಅವರ ವೇತನ ಹೆಚ್ಚಿಸುವ ಕುರಿತಂತೆ ಯತ್ನ ನಡೆಯುತ್ತಿದ್ದು, ಹಣಕಾಸು ವಿಭಾಗದಿಂದ ಒಪ್ಪಿಗೆಗೆ ಕಾಯುತ್ತಿದ್ದೇವೆ ಎಂದು ಸಚಿವರು ತಿಳಿಸಿದರು.