ಕರ್ನಾಟಕ

karnataka

ETV Bharat / state

ಸಿಗರೇಟಿನ ಆರತಿ, ಮತ್ತೇರುವ ಮದ್ಯವೇ ಈ ದೇವರಿಗೆ ನೈವೇದ್ಯ! ಇದು ಕಾರವಾರದ ಖಾಪ್ರಿ ಜಾತ್ರೆ - ಕಾರವಾರ ಲೇಟೆಸ್ಟ್​​ ನ್ಯೂಸ್​​

ದೇವರಿಗೆ ಹಣ್ಣು ಕಾಯಿ ನೈವೇದ್ಯ ಅರ್ಪಿಸುವುದನ್ನು ನೋಡಿದ್ದೀರಿ. ಆದರೆ ಕಾರವಾರದ ಕೋಡಿಭಾಗದಲ್ಲಿ ನಡೆಯುವ ಖಾಪ್ರಿ ದೇವರ ಜಾತ್ರೆ ವಿಭಿನ್ನ.

Khapri Temple Festival Celebration
ಅದ್ದೂರಿಯಾಗಿ ನಡೆದ ಖಾಪ್ರಿ ಜಾತ್ರೆ

By

Published : Mar 13, 2023, 11:30 AM IST

Updated : Mar 13, 2023, 1:39 PM IST

ಕಾರವಾರದ ಖಾಪ್ರಿ ಜಾತ್ರೆ

ಕಾರವಾರ (ಉತ್ತರ ಕನ್ನಡ):ಸಾಮಾನ್ಯವಾಗಿ ದೇವರಿಗೆ ನೈವೇದ್ಯವಾಗಿ ತಿಂಡಿ-ತಿನಿಸು ಹಾಗೂ ಹಣ್ಣು, ಹಂಪಲುಗಳನ್ನು ಸಮರ್ಪಿಸುತ್ತಾರೆ. ಹೆಚ್ಚಾಗಿ ಹಾಲು, ತುಪ್ಪದಿಂದ ಅಭಿಷೇಕ ಮಾಡಿ, ತುಪ್ಪದ ದೀಪದಿಂದ ಆರತಿ ಮಾಡುವುದುಂಟು. ಆದರೆ, ಇಲ್ಲೊಂದು ದೇವರು ಉಳಿದೆಲ್ಲ ದೇವರಿಗಿಂತ ಸಂಪೂರ್ಣ ವಿಭಿನ್ನ. ಮತ್ತೇರಿಸುವ ಮದ್ಯದಿಂದಲೇ ಈ ದೇವರಿಗೆ ಅಭಿಷೇಕ, ಬೀಡಿ-ಸಿಗರೇಟ್‌ನಿಂದಲೇ ಆರತಿ ಬೆಳಗಲಾಗುತ್ತದೆ.

ಒಂದೆಡೆ ದೇವರಿಗೆ ಅರ್ಪಿಸಲು ಬಗೆಬಗೆಯ ಮದ್ಯವನ್ನು ಕೈಯಲ್ಲಿ ಹಿಡಿದು ನಿಂತಿರುವ ಭಕ್ತರು, ಇನ್ನೊಂದೆಡೆ ತರಹೇವಾರಿ ಬಾಟಲಿಗಳಲ್ಲಿ ತಂದಂತಹ ಮದ್ಯವನ್ನು ಅಭಿಷೇಕ ಮಾಡುತ್ತಿರುವ ಅರ್ಚಕರು, ದೇವಸ್ಥಾನದ ಎದುರು ಕ್ಯಾಂಡಲ್‌ಗಳನ್ನು ದೇವರಿಗೆ ಬೆಳಗುತ್ತಿರುವ ಭಕ್ತರು ಮತ್ತೊಂದೆಡೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೋಡಿಭಾಗದಲ್ಲಿ ನಡೆಯುವ ಖಾಪ್ರಿ ದೇವರ ಜಾತ್ರೆಯಲ್ಲಿ ಈ ದೃಶ್ಯಗಳು ನಿಮಗೆ ಕಾಣಸಿಗುತ್ತವೆ.

ಇದನ್ನೂ ಓದಿ:ಶ್ರೀರಂಗನಾಥನಿಗೆ ಮದ್ಯವೇ ನೈವೇದ್ಯ, ಭಕ್ತರಿಗೆ ಅದೇ ತೀರ್ಥ!

ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ಸಾವಿರಾರು ಭಕ್ತರು ಆಗಮಿಸಿ ಖಾಪ್ರಿ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಹರಕೆ ಕಟ್ಟಿಕೊಂಡು ಬರುವ ಭಕ್ತರು ಸಿಗರೇಟ್​​, ಕ್ಯಾಂಡಲ್‌ನಿಂದ ಆರತಿ ಮಾಡಿ ಮದ್ಯದಿಂದಲೇ ಅಭಿಷೇಕವನ್ನೂ ಮಾಡುವರು. ಅಷ್ಟೇ ಅಲ್ಲ, ದೇವರಿಗೆ ಕೋಳಿ ಬಲಿ ಕೊಟ್ಟು ರಕ್ತದಿಂದ ನೈವೇದ್ಯ ಮಾಡುತ್ತಾರೆ. ಖಾಪ್ರಿ ಶಕ್ತಿ ದೇವರು. ಹೀಗಾಗಿ ಇಷ್ಟಾರ್ಥಗಳ ಈಡೇರಿಕೆಗೆ ಈ ರೀತಿಯ ಹರಕೆಗಳನ್ನು ಸಲ್ಲಿಸಲಾಗುತ್ತದೆ ಎನ್ನುತ್ತಾರೆ ಭಕ್ತೆ ರೇಷ್ಮಾ.

ಇತಿಹಾಸ:ಖಾಪ್ರಿ ದೇವರು ಆಫ್ರಿಕಾ ಮೂಲದ್ದು ಎಂಬ ಪ್ರತೀತಿಯಿದೆ. ಆಫ್ರಿಕನ್ ಪ್ರಜೆಯೊಬ್ಬ 300 ವರ್ಷಗಳ ಹಿಂದೆ ಇಲ್ಲಿಗೆ ಬಂದು ದೇವರನ್ನು ತಂದು ಪೂಜಿಸುತ್ತಿದ್ದ. ಆದಾದ ಬಳಿಕ ಆತ ಕಣ್ಮರೆಯಾದ. ಆ ಬಳಿಕ ಇಲ್ಲಿನ ಪರಸಪ್ಪ ಮನೆತನದವರು ಇದೇ ಜಾಗದಲ್ಲಿ ಕೆಲಸ ಮಾಡುವಾಗ ದೇವರ ಕಲ್ಲು ಗೋಚರವಾಗಿದೆ. ನಂತರ ಕನಸಿನಲ್ಲಿ ದೇವರು ಬಂದು ತನಗೆ ಕೋಳಿ ನೈವೇದ್ಯ ಮಾಡು ಅಂತಾ ಕೇಳಿಕೊಂಡಿದ್ದರಿಂದ ಈ ದೇಗುಲ ಕಟ್ಟಲಾಯಿತು ಎನ್ನುವ ಐತಿಹ್ಯವಿದೆ.

ಈ ಜಾತ್ರೆ ನೂರಾರು ವರ್ಷಗಳಿಂದ ನಡೆಯುತ್ತಾ ಬಂದಿದೆ. ಪ್ರತೀ ವರ್ಷ ಇದೇ ರೀತಿ ದೇವರಿಗೆ ಫಲ ಪುಷ್ಪ ಸಮರ್ಪಿಸುವ ಜತೆಗೆ ಸಾರಾಯಿ, ಸಿಗರೇಟ್ ಮತ್ತು ಕೋಳಿಯನ್ನೂ ಭಕ್ತರು ಅರ್ಪಿಸುತ್ತಾರೆ. ದೇಗುಲ ಹೆದ್ದಾರಿಗೆ ಹೊಂದಿಕೊಂಡಂತಿದೆ. ಹೀಗಾಗಿ, ಅಪಘಾತಗಳ ಸಂಖ್ಯೆಯೂ ಕಡಿಮೆಯಾಗಿದೆ ಅನ್ನೋದು ಭಕ್ತರ ಮಾತು.

ಪ್ರತೀ ವರ್ಷದ ಮಾರ್ಚ್ ತಿಂಗಳಲ್ಲಿ ನಡೆಯುವ ಜಾತ್ರೆಗೆ ಕೇವಲ ಕಾರವಾರದಿಂದ ಮಾತ್ರವಲ್ಲದೇ ನೆರೆಯ ಗೋವಾ ಹಾಗೂ ಮಹಾರಾಷ್ಟ್ರದಿಂದಲೂ ಭಕ್ತರು ಆಗಮಿಸುತ್ತಾರೆ. ದೇವರಿಗೆ ವಿವಿಧ ಸೇವೆ ನೀಡಿ ತಮ್ಮ ಹರಕೆ ತೀರಿಸುತ್ತಾರೆ ಎಂದು ಅರ್ಚಕ ವಿನಾಯಕ ತಿಳಿಸಿದ್ದಾರೆ.

ಇದನ್ನೂ ಓದಿ:ಬಬಲಾದಿ ಸದಾಶಿವನ ಜಾತ್ರೆ: ಇಲ್ಲಿ ದೇವರಿಗೆ ಮದ್ಯವೇ ನೈವೇದ್ಯ

Last Updated : Mar 13, 2023, 1:39 PM IST

ABOUT THE AUTHOR

...view details